ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಗಾಂಪನ ಪುರಾಣ’ ಪ್ರಕಟ…

ಮಂಗಳೂರು: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಬರೆದ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳ ಮಾಹಿತಿ ಕೋಶ ‘ಗಾಂಪನ ಪುರಾಣ’ ಪರಪೋಕುದ ಪಟ್ಟಾಂಗ ಬಿಡುಗಡೆಗೆ ಸಿದ್ಧವಾಗಿದೆ. ತುಳು ಭಾಷೆಯ ಸೊಗಡಿನೊಂದಿಗೆ ಸರಸ ಸಂಭಾಷಣೆ ರೂಪದಲ್ಲಿ ರಚಿಸಲ್ಪಟ್ಟಿರುವ ಈ ಕೃತಿ ಮಂಗಳೂರು ಆಕಾಶವಾಣಿಯ ‘ಗಾಂಪಣ್ಣನ ತಿರ್ಗಾಟ’ ಪ್ರಾಯೋಜಿತ ಸರಣಿಯಲ್ಲಿ 32 ಕಂತುಗಳಲ್ಲಿ ಪ್ರಸಾರವಾಗಿದ್ದು ಇದೀಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಗ್ರಂಥ ರೂಪದಲ್ಲಿ ಪ್ರಕಟವಾಗುತ್ತಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕಾಧ್ಯಕ್ಷರಾದ ಹಿರಿಯ ಸಾಹಿತಿ, ಹಂಪಿ ವಿ.ವಿ. ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಕೃತಿಯನ್ನು ಬಿಡುಗಡೆಗೊಳಿಸುವರು. ಇದೇ ಜೂನ್ 16, 2022 ರಂದು ಗುರುವಾರ ಅಪರಾಹ್ನ ಗಂ. 3.00 ಕ್ಕೆ ತುಳು ಅಕಾಡೆಮಿಯ ಸಿರಿ ಚಾವಡಿಯಲ್ಲಿ ಜರಗುವ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ವಹಿಸುವರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹಾಗೂ ಕಲ್ಬುರ್ಗಿ ಆಕಾಶವಾಣಿ ಕಾರ್ಯಕ್ರಮ ನಿರ್ಮಾಪಕ ಡಾ.ಸದಾನಂದ ಪೆರ್ಲ ಮುಖ್ಯ ಅತಿಥಿಗಳಾಗಿರುವರು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಪುರಸ್ಕೃತೆ ಹಾಗೂ ಸಹ್ಯಾದ್ರಿ ಇಂಜಿನೀಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಿ ಅಕ್ಷಯ ಆರ್.ಶೆಟ್ಟಿ ಕೃತಿ ಪರಿಚಯ ಮಾಡಿವರು.
ಇದೇ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಮತ್ತೊಂದು ಪ್ರಕಟಣೆ, ಲೇಖಕ ಡಾ.ವಸಂತ ಕುಮಾರ್ ಪೆರ್ಲ ಅವರ ‘ರವೀಂದ್ರ ಕಬಿತೆಲು’ ಪುಸ್ತಕವೂ ಬಿಡುಗಡೆಯಾಗಲಿದೆ. ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕೃತಿ ಪರಿಚಯಿಸುವರು.

Sponsors

Related Articles

Back to top button