ಸಿಇಟಿ ಪರೀಕ್ಷೆ ದಿನಾಂಕ ಬದಲಾವಣೆ ಸಾಧ್ಯವಿಲ್ಲ – ಡಿಸಿಎಂ ಅಶ್ವತ್ಥನಾರಾಯಣ…

ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜು. 30, 31 ರಂದು ನಡೆಯಲಿರುವ ಸಿಇಟಿ ಪರೀಕ್ಷೆಯ ದಿನ ಬದಲಾವಣೆ ಸಾಧ್ಯವಿಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಜುಲೈ 31ರಂದು ಕರಾವಳಿ ಜಿಲ್ಲೆಗಳು ಸೇರಿದಂತೆ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಬಕ್ರೀದ್ ಹಬ್ಬ ಇರುವುದರಿಂದ ಸಿಇಟಿ ಪರೀಕ್ಷೆ ದಿನ ಬದಲಾಯಿಸುವಂತೆ ಶಾಸಕ ಯು.ಟಿ. ಖಾದರ್ ಅವರು, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹಾಗೂ ಸರಕಾರದ ಮುಖ್ಯಕಾರ್ಯದರ್ಶಿ ಅವರ ಗಮನಕ್ಕೆ ತಂದಿದ್ದರು.
ಇದನ್ನು ಪರಿಶೀಲಿಸಿರುವ ಉಪಮುಖ್ಯಮಂತ್ರಿ, 1.94 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಲಾಗಿದೆ. ಪರೀಕ್ಷಾ ಸೆಂಟರ್ ಗಳಲ್ಲಿ ಬೇಕಾಗಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ದಿನಾಂಕ ಬದಲಾವಣೆ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ.