ಯುವಕನ ಅಶ್ಲೀಲ ಚಿತ್ರ ಸಂಗ್ರಹಿಸಿ ಮಹಿಳೆಯರಿಬ್ಬರಿಂದ ಬ್ಲಾಕ್ ಮೇಲ್…
ಮಂಗಳೂರು : ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಯುವಕನೋರ್ವನಿಗೆ ಮಹಿಳೆಯರಿಬ್ಬರು ಬ್ಲಾಕ್ ಮೇಲ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಯುವಕರ ದೌರ್ಬಲ್ಯವನ್ನು ಬಳಸಿಕೊಂಡು ಹಣ ಗಳಿಸಲು ಹೆಣೆಯುವ ಹನಿ ಟ್ರಾಪ್ ಗೆ ಒಳಗಾದ ಯುವಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡದ ಕುಂಬಳೆ ಮೂಲದವನಾದ ಯುವಕನೋರ್ವನಿಗೆ ಕೆಲವು ದಿನಗಳ ಹಿಂದೆ ಸುರತ್ಕಲ್ ಹತ್ತಿರದ ಕೃಷ್ಣಾಪುರದ ಇಬ್ಬರು ಮಹಿಳೆಯರ ಸ್ನೇಹವಾಗಿತ್ತು. ದಿನನಿತ್ಯವೂ ಇಬ್ಬರು ಮಹಿಳೆಯರೊಂದಿಗೆ ಫೇಸ್ಬುಕ್ ಮೆಸ್ಸೆಂಜರ್ ನಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕನನ್ನು ಯುವತಿಯರಿಬ್ಬರು ಕೃಷ್ಣಾಪುರಕ್ಕೆ ಕರೆಸಿಕೊಂಡಿದ್ದಾರೆ. ಈ ಸಮಯದಲ್ಲಿ ಯುವತಿಯರೊಂದಿಗೆ ಇನ್ನಿಬ್ಬರು ಸೇರಿ ಯುವಕನನ್ನು ವಿವಸ್ತ್ರಗೊಳಿಸಿ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ.
ಆನಂತರ 5 ಲಕ್ಷ ರೂಪಾಯಿ ಹಣ ಕ್ಕೆ ಬೇಡಿಕೆಯಿಟ್ಟಿದ್ದು, ಕೊಡದೆ ಹೋದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿ ಬೆದರಿಸಿದ್ದಾರೆ. ಆತನಲ್ಲಿ ಹಣವಿಲ್ಲದೇ ಇದ್ದುದರಿಂದ ಆತನಲ್ಲಿದ್ದ ಕಾರನ್ನು ಪಡೆದು ಆತನನ್ನು ವಾಪಾಸ್ ಕಳಿಸಿಕೊಟ್ಟಿದ್ದರು. ನಂತರ ಪ್ರತಿ ನಿತ್ಯ ದುಡ್ಡಿಗಾಗಿ ನಿರಂತರ ಕಿರುಕುಳ ನೀಡುತ್ತಾ ಬಂದಿದ್ದಾರೆ. ಮನನೊಂದ ಯುವಕ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾನೆ. ಆರೋಪಿಗಳನ್ನು ಬಂಧಿಸುವುದಕ್ಕೋಸ್ಕರ ಉಪಾಯ ಹೂಡಿದ್ದು, ಯುವಕನು ತಾನು 30 ಸಾವಿರ ಕೊಡಲು ಬರುವುದಾಗಿ ಹೇಳಿದ್ದಾನೆ.ಪಂಪ್ ವೆಲ್ ನ ಸರ್ಕಲ್ ಬಳಿ ಪೊಲೀಸರು ಬಲೆ ಬೀಸಿ ಕೂತಿದ್ದರು. ಅಲ್ಲಿಗೆ ಹಣ ಪಡೆಯಲು ಬಂದಿದ್ದ ನಾಲ್ವರು ಆರೋಪಿಗಳಿಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಇದೀಗ ಪ್ರಕರಣವನ್ನು ಸಿಸಿಬಿ ಪೊಲೀಸರು ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.