ಸುಳ್ಯ – ಕಸ ಸಾಗಾಟ ವಾಹನಕ್ಕೆ ಸಾರಥಿಯಾದ ನ. ಪಂ. ಅಧ್ಯಕ್ಷ ವಿನಯ್ ಕುಮಾರ್….
ಸುಳ್ಯ : ಸುಳ್ಯ ನಗರ ಪಂಚಾಯತ್ ನ ಕಸ ಸಾಗಾಟದ ವಾಹನಕ್ಕೆ ಸಿಬ್ಬಂದಿಗಳ ಕೊರತೆ ಎದುರಾದ ಹಿನ್ನಲೆಯಲ್ಲಿ ನ. ಪಂ. ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಅವರೇ ಸಾರಥಿಯಾದ ಘಟನೆ ಜೂ.18 ರಂದು ನಡೆದಿದೆ.
ಪೌರ ಕಾರ್ಮಿಕರು ಕ್ವಾರಂಟೈನ್ ಆದುದರಿಂದ ಕಸ ಸಾಗಾಟ ವಾಹನ ಚಲಿಸುವುದಿಲ್ಲ ಎಂದು ಗೊತ್ತಾದಾಗ ಸ್ವತಃ ನ. ಪಂ. ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಅವರೇ ಕಸ ಸಾಗಾಟ ವಾಹನದ ಸಾರಥಿಯಾಗಿ ಸಹಕರಿಸಿದ ಈ ಘಟನೆ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ವಿನಯ್ ಕುಮಾರ್ ಕಂದಡ್ಕ ಅವರು ಕಸ ಸಾಗಾಟ ವಾಹನದ ಸಾರಥಿಯಾದುದು ಇದು ಮೊದಲೇನಲ್ಲ. ಈ ಹಿಂದೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಸಾರ್ವಜನಿಕ ಸಮಾರಂಭದ ಬಳಿಕ ಮೈದಾನದಲ್ಲಿ ತುಂಬಿದ್ದ ಕಸವನ್ನು ಸಂಗ್ರಹಿಸಿ ವಾಹನದಲ್ಲಿ ಸ್ವತಃ ಚಾಲನೆ ಮಾಡಿ ಅವರು ವಿಲೇವಾರಿ ಮಾಡಿದ್ದರು.
ಜೂ. 18 ರಂದು ತ್ಯಾಜ್ಯ ಸಂಗ್ರಹಕ್ಕೆ ಸಿಬ್ಬಂದಿಗಳ ಕೊರತೆ ಎದುರಾದ ಹಿನ್ನಲೆಯಲ್ಲಿ ಇವರು ಲಭ್ಯರಿದ್ದ ಕಾರ್ಮಿಕರೊಂದಿಗೆ ಕಸ ವಿಲೇವಾರಿ ವಾಹನ ಚಾಲನೆ ಮಾಡಿ ಮನೆ ಮನೆ ತೆರಳಿ ಕಸ ಸಂಗ್ರಹ ಮಾಡಿದರು. ನ.ಪಂ. ಆರೋಗ್ಯ ನಿರೀಕ್ಷಕ ಲಿಂಗರಾಜು ಜೊತೆಯಲ್ಲಿದ್ದರು.
ಕಸವನ್ನು ಮೂಲದಿಂದಲೇ ಬೇರ್ಪಡಿಸಬೇಕು ಎಂಬ ತತ್ವವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಪ್ರಯತ್ನ ನಡೆಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮನೆ ಮನೆ ತೆರಳಿ ಕಸ ಸಂಗ್ರಹದ ಸಂದರ್ಭ ಕಸ ತರುವವರೊಂದಿಗೆ ಮನೆಯಿಂದಲೇ ಕಸ ಬೇರ್ಪಡಿಸಿ ನೀಡಬೇಕು ಎಂದು ಮಾಹಿತಿ ನೀಡಿದ್ದೇವೆ. ಈ ಬಗ್ಗೆ ನಗರದಲ್ಲಿ ಎಲ್ಲೆಡೆ ಜಾಗೃತಿ ನಡೆಸುತ್ತಿದ್ದೇವೆ. ಪ್ಲಾಸ್ಟಿಕ್ ನ್ನು ಪ್ರತೀ ದಿನ ನೀಡದೆ ನಿಗದಿತ ದಿನದಂದು ಮಾತ್ರ ನೀಡುವ ಕುರಿತು ಕಸ ನೀಡುವವರಿಗೆ ತಿಳಿಸಿದ್ದೇವೆ ಎಂದು ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ.