ವಾಲ್ಮೀಕಿ ಕವಿ ಮಾತ್ರವಲ್ಲ ದಾರ್ಶನಿಕರು-ತುಕಾರಾಮ ಪೂಜಾರಿ…
ಬಂಟ್ವಾಳ ಅ.18 :ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯವನ್ನು ಲೋಕಕ್ಕೆ ಅರ್ಪಣೆ ಮಾಡಿದ ಮಹಾನ್ ದಾರ್ಶನಿಕರು. ಸಹಸ್ರಾರು ವರ್ಷಗಳ ಇತಿಹಾಸದ ಹಿನ್ನಲೆಯಲ್ಲಿ ಶ್ರೀರಾಮನ ವ್ಯಕ್ತಿತ್ವದ ಮೂಲಕ ಪರಮಾತ್ಮನನ್ನು ಜಗತ್ತಿಗೆ ಪರಿಚಯಿಸಿದರು ಎಂದು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕ ಡಾ.ತುಕಾರಾಮ ಪೂಜಾರಿಯವರು ಅಭಿಪ್ರಾಯ ಪಟ್ಟರು.
ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿಸಿರೋಡು ಸಂಚಯಗಿರಿ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಏರ್ಪಡಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಮಾತನಾಡಿ ರಾಮಾಯಣ ಕಾವ್ಯ ಭಾರತೀಯ ಸಂಸ್ಕೃತಿಯ ಅಡಿಪಾಯ. ಮಾನವ ಮತ್ತು ಪ್ರಕೃತಿಯ ಅವಿನಾಭಾವ ಸಂಬಂಧಗಳನ್ನು ಸುಂದರ ರೂಪಕಗಳ ಮೂಲಕ ಕಟ್ಟಿಕೊಟ್ಟು ಸಾರ್ವಕಾಲಿಕ ಮೌಲ್ಯಗಳನ್ನು ವಾಲ್ಮೀಕಿ ಮಹರ್ಷಿ ತಿಳಿಸಿದ್ದಾರೆ ಎಂದರು.
ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಂಚಾಲಕ ಕೈಯೂರು ನಾರಾಯಣ ಭಟ್,ನಿವೃತ್ತ ಉಪನ್ಯಾಸಕ ಸುಬ್ರಾಯ ಮಡಿವಾಳ,ಕೋಕಳ ರಾಮಕೃಷ್ಣ ನಾಯಕ್,ನಿವೃತ್ತ ಮುಖ್ಯೋಪಾಧ್ಯಾಯ ಅನಾರು ಕೃಷ್ಣ ಶರ್ಮ,ನಿವೃತ್ತ ಆರೋಗ್ಯ ಇಲಾಖಾಧಿಕಾರಿ ಜಯರಾಮ ಪೂಜಾರಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಅಭಾಸಾಪ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರೊ. ರಾಜಮಣಿ ರಾಮಕುಂಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯದರ್ಶಿ ಮಧುರಾ ಕಡ್ಯ ಕಲ್ಲಡ್ಕ ನಿರೂಪಿಸಿ ವಂದಿಸಿದರು.