ಅಕ್ಟೋಬರ್ 2 ರಂದು ಮಡಿಕೇರಿಯಲ್ಲಿ ಡಾ। ಪ್ರಭಾಕರ ಶಿಶಿಲರ ಕೃತಿ ‘ ಬೆಳಕಿನಡೆಗೆ ‘ ಬಿಡುಗಡೆ…
ಸುಳ್ಯ : ಅಕ್ಟೋಬರ್ 2 ರಂದು ಮಡಿಕೇರಿ ಪತ್ರಿಕಾಭವನದಲ್ಲಿ ಹಿರಿಯ ವಿದ್ವಾಂಸ ಡಾ. ಬಿ ಪ್ರಭಾಕರ ಶಿಶಿಲರ 10 ಕತೆಗಳ ಸಂಕಲನ ‘ಬೆಳಕಿನಡೆಗೆ’ ಎಂಬ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ ಎಂದು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಕಾರ್ಯಕ್ರಮದಲ್ಲಿ ಮೂರು ಪ್ರಖ್ಯಾತ ಸಾಹಿತಿಗಳ ಮೂರು ಕೃತಿಗಳು ಲೋಕಾರ್ಪಣೆಗೊಳ್ಳಲಿದ್ದು, ಕೊಡಗು ಲೇಖಕರ ಮತ್ತು ಕಲಾವಿದರ ಬಳಗ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ಕೊಡಗು ಲೇಖಕರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಕೇಶವ ಕಾಮತ್ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಲಿದ್ದು, ಹಿರಿಯ ವಿಮರ್ಶಕ ವಕೀಲ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಡಾ. ಪ್ರಭಾಕರ್ ಶಿಶಿಲರವರು ರಚಿಸಿದ ‘ಬೆಳಕಿನಡೆಗೆ’ ಪುಸ್ತಕದಲ್ಲಿ 10 ಕಥೆಗಳು ಮುಸ್ಲಿಂ ಕಥಾಗುಚ್ಛವಾಗಿದ್ದು ಇದು ಪ್ರಪ್ರಥಮ ಬಾರಿಗೆ ಮುಸ್ಲಿಮೇತರ ಓರ್ವರು ಮುಸ್ಲಿಂ ಕತೆಗಳನ್ನು ಬರೆದ ಕೀರ್ತಿ ಶಿಶಿಲರವರದ್ದಾಗಿದೆ. ಈಗಾಗಲೇ ಇವುಗಳಲ್ಲಿ 8 ಕಥೆಗಳು ಮಯೂರ ಮಾಸಿಕದಲ್ಲಿ ಪ್ರಕಟವಾಗಿದ್ದು, ಹಿಂದೂ-ಮುಸ್ಲಿಮ್ ಸಾಮರಸ್ಯವನ್ನು ಸಾರುವ ಈ ಕಥೆಗಳು ಶಂಸುದ್ದೀನ್ ಮಡಿಕೇರಿ ಅವರಿಂದ ಬ್ಯಾರಿ ಭಾಷೆಗೆ ಅನುವಾದಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಟಿ.ಎಂ ಶಹಿದ್ ತೆಕ್ಕಿಲ್ ಅವರ 50ನೇ ವರ್ಷದ ಹುಟ್ಟುಹಬ್ಬದ ಸುವರ್ಣ ಸಂಭ್ರಮ ಆಚರಣಾ ಸಮಿತಿಯ ವತಿಯಿಂದ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳಲ್ಲಿ ಒಂದು ಕಾರ್ಯಕ್ರಮವಾಗಿ ಇದನ್ನು ಆಚರಿಸಲಾಗುವುದು ಎಂದು ಹೇಳಿದರು. ಈ ಕಥೆಗಳು ಈಗಾಗಲೇ ತುಳು, ಅರೆಭಾಷೆ, ಮಲಯಾಳಂ, ತೆಲುಗು, ಕೊಡವ ಭಾಷೆಗೆ ಅನುವಾದಿಸುತ್ತಿದ್ದಾರೆ. ಈ ಕಥಾಸಂಕಲನವನ್ನು ಹಿರಿಯ ವಿಮರ್ಶಕ ಸಂಸುದ್ದಿನ್ ಮಡಿಕೇರಿ ಲೋಕಾರ್ಪಣೆಗೊಳಿಸಲಿದ್ದಾರೆ. ಭಾವೈಕ್ಯದ ಅನಿವಾರ್ಯತೆಯನ್ನು ಸಾರುವ ಮತ್ತು ಸಂಸ್ಕೃತಿಯ ಬಹುತ್ವವನ್ನು ಗೌರವಿಸುವ ಈ ಕೃತಿಯನ್ನು ನಮ್ಮ ಅಜ್ಜ ತೆಕ್ಕಿಲ್ ಮಹಮ್ಮದ್ ಹಾಜಿಯವರ ದಿವ್ಯ ಸ್ಮರಣೆಗಾಗಿ ಹೊರ ತರುತ್ತಿದ್ದೇವೆ ಎಂದು ಹೇಳಿದರು. ಅದೇ ರೀತಿ ಅಂದಿನ ಕಾರ್ಯಕ್ರಮದಲ್ಲಿ ಶ್ರೀಮತಿ ಸಹನಾ ಕಾಂತಬೈಲು ರವರ ಪ್ರಬಂಧ ಸಂಕಲನ ಇದು ಬರೀ ಮಣ್ಣಲ್ಲ ಎಂಬ ಕೃತಿ, ಹಾಗೂ ರಾಜ್ಯಮಟ್ಟದ ಕವಯತ್ರಿ ಶ್ರೀಮತಿ ಸ್ಮಿತಾ ಅಮೃತರಾಜ್ ರವರ ನೆಲ ದಾಯ ಪರಿಮಳ ಎಂಬ ಕೃತಿ ಕೂಡ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.
ಬೆಳಕಿನೆಡೆಗೆ ಕೃತಿಗಳ ಸಂಪಾದಕ ಡಾ. ಶಿಶಿಲರವರು ಮಾತನಾಡಿ, ನಾನು ಬರೆದ ಕೃತಿಗಳನ್ನು ಲೋಕಾರ್ಪಣೆ ಗೊಳಿಸಲು ನನಗೆ ಸಂಪೂರ್ಣ ಸಹಕಾರ ನೀಡಿದ ಟಿ.ಎಂ ಶಹೀದ್ ರವರನ್ನು ಅಭಿನಂದಿಸುತ್ತೇನೆ. ಏಕೆಂದರೆ ಒಬ್ಬ ಸಾಹಿತಿ ಒಂದು ಕಥೆಯನ್ನು ಬರೆದು ಅದನ್ನು ಲೋಕಾರ್ಪಣೆಗೊಳಿಸುವುದು ಎಂದರೆ ಒಬ್ಬ ತಾಯಿ ಒಂದು ಮಗುವನ್ನು ಹೆತ್ತ ರೀತಿಯಲ್ಲಿ ಎಂದು ಅವರು ಹೇಳಿದರು. ಕಥೆ ಅಂದ ತಕ್ಷಣ ಅದಕ್ಕೆ ಪರ ಮತ್ತು ವಿರೋಧ ಮಾತುಗಳು ಸಹಜವಾಗಿ ಬರುತ್ತದೆ. ಮತ್ತು ಆ ಕಥೆಗಳ ಮುದ್ರಣಕ್ಕೆ ಆರ್ಥಿಕವಾಗಿಯೂ ಬಹಳಷ್ಟು ಹಣಗಳ ಅವಶ್ಯ ಗಳಿರುತ್ತವೆ. ಸಮಾಜದಲ್ಲಿ ನಡೆಯುವ ಸತ್ಯ ಘಟನೆಗಳನ್ನು ಮತ್ತು ನಮ್ಮ ಮನಸ್ಸಿನಲ್ಲಿ ಬರುವ ವ್ಯಥೆ ಗಳನ್ನು ಕಥೆಗಳನ್ನಾಗಿ ಬರೆದು ಅದನ್ನು ಓದುಗರ ಮುಂದೆ ಇಡುತ್ತೇವೆ. ಬೆಳಕಿನಡೆಗೆ ಕಥಾಸಂಕಲನ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಇದರಲ್ಲಿ ೧೦ ಮುಸ್ಲಿಂ ಕಥೆಗಳಿದ್ದು ಈಗಾಗಲೇ ಮಯೂರ ಮತ್ತು ಮಂಗಳ ಪುಸ್ತಕಗಳಲ್ಲಿ ಬೆಳಕು ಕಂಡಿದೆ. ಸಾಮರಸ್ಯ ಸಹಬಾಳ್ವೆ ಸಹಿಷ್ಣುತೆ ಬಹುತ್ವಕ್ಕೆ ಗೌರವ ಸಲ್ಲಿಸಿ, ನಾನು ಹೆಚ್ಚಿಗೆ ಮಹತ್ವವನ್ನು ನೀಡುವ ಸ್ತ್ರೀಯರ ಸ್ವಾತಂತ್ರ್ಯದ ಬಗ್ಗೆ ಈ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕೃತಿಯ ಮುಖಪುಟ ಮತ್ತು ಒಳ ಚಿತ್ರಗಳು ಖ್ಯಾತ ಕಲಾವಿದ ಮೋನಪ್ಪ ಬೆಂಗಳೂರು ಬಿಡಿಸಿದ್ದು ಹಿರಿಯ ಸಾಹಿತಿ ಎಂ ಕೆ ಬೊಳುವಾರು ಹಿನ್ನುಡಿ ಬರೆದಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಟಿ ಎಂ ಶಹೀದ್ ತೆಕ್ಕಿಲ್ ರವರ 50 ನೇ ಹುಟ್ಟುಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾದ ಸದಾನಂದ ಮಾವಜಿ, ಕಾರ್ಯದರ್ಶಿ ಕೆ.ಟಿ ವಿಶ್ವನಾಥ್, ಸಂಚಾಲಕ ಅಶ್ರಫ್ ಗುಂಡಿ, ನಿರ್ದೇಶಕರಾದ ಮಜೀದ್ ಉಪಸ್ಥಿತರಿದ್ದರು.