ಬಂಟ್ವಾಳ- ದೇಶದಲ್ಲಿ ಕೋವಿಡ್ ಲಸಿಕೆ 100 ಕೋಟಿ ದಾಟಿದ ಸಂಭ್ರಮಾಚರಣೆ…

ಬಂಟ್ವಾಳ: ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಲಸಿಕೆ ಕೊಟ್ಟ ದೇಶ ಎಂದು ಹೆಮ್ಮೆಯಿಂದ ಹೇಳುವ ಸಂದರ್ಭ ಬಂದಿದ್ದು,‌ ಈ ಸಾಧನೆಗೆ ಕಾರಣವಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಬೇಕಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ದೇಶದಲ್ಲಿ ಕೋವಿಡ್ ಲಸಿಕೆ 100 ಕೋಟಿ ದಾಟಿದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿಯನ್ನು ಗೌರವಿಸಿ ಮಾತನಾಡಿದರು.
ಪ್ರಧಾನಿಯವರು ಪ್ರಾರಂಭದಲ್ಲಿ ಎಲ್ಲರಿಗೂ ಲಸಿಕೆ ನೀಡುತ್ತೇವೆ ಎಂದಾಗ ಸಾಕಷ್ಟು ಮಂದಿ ಜೋಕ್ ಎಂದು ನಕ್ಕಿದ್ದರು. ಆದರೆ ಪ್ರಧಾನಿ ಈಗ ಅದಕ್ಕೆಲ್ಲಾ ಉತ್ತರ ನೀಡಿದ್ದಾರೆ. ಬಂಟ್ವಾಳದಲ್ಲಿ ಈಗಾಗಲೇ 3 .60 ಲಕ್ಷ ಮಂದಿ ಲಸಿಕೆ ಪಡೆದಿದ್ದು, 2 .48 ಲಕ್ಷ ಮೊದಲ ಡೋಸ್ ಹಾಗೂ 1 .21 ಲಕ್ಷ ಎರಡನೇ ಡೋಸ್ ಪಡೆದಿದ್ದಾರೆ. 60 ವರ್ಷ ದಾಟಿದವರು 42 ಸಾವಿರ ಮಂದಿ, 40 ವರ್ಷ ದಾಟಿದವರು 74 ಸಾವಿರ ಮಂದಿ 18 ವರ್ಷ ದಾಟಿದವರು 1 ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ. 25 ಸಾವಿರದಷ್ಟು ಲಸಿಕೆ ನಮ್ಮಲ್ಲಿ ಸ್ಟಾಕ್ ಇದೆ ಎಂದು ವಿವರಿಸಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಪ್ರಧಾನಿ ಮೋದಿಯವರು ತಾನು ನೀಡಿದ ಅವಧಿಗೆ ಮೊದಲೇ 100 ಕೋಟಿ ಸಾಧನೆ ಮಾಡಿದ್ದು, ಅವರ ಸಂಕಲ್ಪವನ್ನು ಸಾಕಾರಗೊಳಿಸಿದ ಎಲ್ಲಾ ಆರೋಗ್ಯ ಕ್ಷೇತ್ರದ ಎಲ್ಲಾ ಸಿಬಂದಿಗೆ ಕೃತಜ್ಞತೆ ಸಲ್ಲಿಸಬೇಕಿದೆ. ಬಂಟ್ವಾಳದಲ್ಲಿ ಕೋವಿಡ್ ನಿಯಂತ್ರಣಕ್ಕೆ ಶಾಸಕರ ಮಾರ್ಗದರ್ಶನದಲ್ಲಿ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಷ್ಪಲತಾ, ಪುರಸಭಾ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ವಿಶ್ವನಾಥ್ ಚಂಡ್ತಿಮಾರ್, ಪ್ರಮುಖರಾದ ರೊನಾಲ್ಡ್ ಡಿಸೋಜ, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ಯಶೋಧರ ಕರ್ಬೆಟ್ಟು, ಆನಂದ ಶಂಭೂರು ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಸ್ವಾಗತಿಸಿದರು.

Sponsors

Related Articles

Back to top button