ಯೆನೆಪೋಯ ಇಂಜಿನಿಯರಿಂಗ್ ಕಾಲೇಜು – ಕನ್ನಡ ಸಂಗಮ 2021…
ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಸಂಗಮ 2021 ನ. 13 ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಮಾತನಾಡಿ, ಕನ್ನಡ ಭಾಷೆಗೆ ಎಂದಿಗೂ ಸಾವಿಲ್ಲ. ಸ್ವಚ್ಛವಾದ ಕನ್ನಡ ಮಾತನಾಡುವ ತಾಯಿಯಂದಿರಿಂದ, ಕನ್ನಡ ಕಲಾವಿದರಿಂದ, ಹಳ್ಳಿ ಜನರಿಂದ ಕನ್ನಡ ಭಾಷೆ ಉಳಿದಿದೆ ಹಾಗೂ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಕವಿಗಳು, ಸಾಹಿತಿಗಳು ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಲಿದ್ದಾರೆ ಎಂದರು. ಕನ್ನಡ ಅತ್ಯಂತ ಸುಂದರವಾದ ಭಾಷೆ ಹಾಗೂ ವೈವಿಧ್ಯಮಯ ಭಾಷೆ. ವಿವಿಧ ಪ್ರದೇಶಗಳ ಕನ್ನಡ ಭಾಷೆಗಳಿಗೆ ಅದರದ್ದೇ ಆದ ಸೌಂದರ್ಯವಿದೆ. ಎಲ್ಲರೂ ಹೆಚ್ಚು ಹೆಚ್ಚು ಕನ್ನಡ ಮಾತನಾಡಬೇಕು ಎಂದರಲ್ಲದೆ ಜಗತ್ತಿನ ಯಾವ ಮೂಲೆಗೆ ಹೋದರೂ ಕನ್ನಡ ಬಿಡಬೇಡಿ. ಕನ್ನಡ ನಮ್ಮ ಉಸಿರಿನ ಭಾಷೆಯಾಗಬೇಕು. ಬದುಕಿನ ಭಾಷೆಯಾಗಬೇಕು ಎಂದರು. ಕನ್ನಡದ ಮಹತ್ವವನ್ನು ಸಾರುವ ವಿವಿಧ ಕವಿಗಳ ಬರಹಗಳನ್ನೂ ಅವರು ತಮ್ಮ ಮಾತಿನಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು ಮಾತ್ರವಲ್ಲದೆ ಕನ್ನಡ ಭಾಷೆಯ ಸ್ಪಷ್ಟ ಉಚ್ಚಾರಣೆಯ ಉದಾಹರಣೆಗಾಗಿ ಕನ್ನಡ ನಾಟಕಗಳ ಸಂಭಾಷಣೆಗಳನ್ನೂ ಹೇಳಿದರು.
ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸತೀಶ ಎನ್. ಅವರು “ಎಲ್ಲಾದರೂ ಇರು, ಎಂತಾದರೂ ಇರು” ಹಾಡನ್ನು ಹಾಡಿದರಲ್ಲದೆ ಕನ್ನಡ ಭಾಷೆಯ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿ ಪ್ರೊ. ಶ್ರೀನಿವಾಸ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಫಿಝ ಮತ್ತು ತಂಡದವರು ಪ್ರಾರ್ಥಿಸಿದರು. ಮನಿಷಾ ಸ್ವಾಗತಿಸಿ, ಅತಿಥಿ ಪರಿಚಯ ಮಾಡಿದರು. ಚೈತ್ರ ವಂದಿಸಿದರು. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.