ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವಿಶ್ವ ಪ್ರಕೃತಿ ಸಂರಕ್ಷಣ ದಿನಾಚರಣೆ…
ಪುತ್ತೂರು: ಮಾನವನ ಆರ್ಥಿಕಾಭಿವೃದ್ಧಿ ಹಾಗೂ ಕೊಳ್ಳುಬಾಕತನವು ಪರಿಸರದ ಮೇಲೆ ಅಗಾಧ ದುಷ್ಪರಿಣಾಮವನ್ನು ಬೀರುತ್ತಿದ್ದು, ಮಾಲಿನ್ಯ ಮುಕ್ತ ಪ್ರಕೃತಿಯನ್ನು ಬೆಳೆಸಿ, ಉಳಿಸಿ ಅದರ ಜತೆ ನಾವೂ ಬೆಳೆಯುವ ಸಂಕಲ್ಪವನ್ನು ಮಾಡಬೇಕು ಎಂದು ಪುತ್ತೂರಿನ ಸ್ವಾಯತ್ತ ವಿವೇಕಾನಂದ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಪ್ರಕಾಶ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎನ್‍ಎಸ್‍ಎಸ್ ಮತ್ತು ಯೂತ್ ರೆಡ್‍ಕ್ರಾಸ್ ವಿಭಾಗಗಳ ಆಶ್ರಯದಲ್ಲಿ ನಡೆದ ವಿಶ್ವ ಪ್ರಕೃತಿ ಸಂರಕ್ಷಣ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರಾಣಿವರ್ಗ ಮತ್ತು ಸಸ್ಯವರ್ಗವನ್ನು ಬೆಳೆಸಿ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ನಡೆಯುವ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಕೊಳ್ಳಬೇಕು ಎಂದರು. ಸಾಮಾಜಿಕ ಕಳಕಳಿಯನ್ನು ಹೊತ್ತು ವಿವಿಧ ಸೇವಾ ವಿಭಾಗಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಧೈರ್ಯ ಹಾಗೂ ಸಾಮರ್ಥ್ಯ ಸಿದ್ದಿಸುತ್ತದೆ ಎಂದರು. ಜೀವನದಲ್ಲಿ ಸಂವೇದನಾತ್ಮಕ ಪ್ರತಿಕ್ರಿಯೆಗಳು ಕಡಿಮೆಯಾಗುತ್ತಿದ್ದು ಸಮಾಜದಲ್ಲಿ ಕ್ರೌರ್ಯ ಹೆಚ್ಚಾಗುತ್ತಿದೆ ಇದು ಸಾಮಾಜಿಕ ದುರಂತವಾಗಿ ಪರಿಣಮಿಸಿದೆ. ಇದರ ನಿವಾರಣೆಗೋಸ್ಕರ ಕರುಣೆ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ತಮ್ಮೊಳಗೆ ಮೌಲ್ಯಗಳನ್ನು ವೃದ್ಧಿಸುತ್ತಾ ಹೋದಂತೆ ಸಮಾಜದಲ್ಲಿ ಗೌರವ ಸಿಗುತ್ತದೆ ಈ ಮೌಲ್ಯಗಳ ಉನ್ನತಿಗಾಗಿ ಎಲ್ಲರೂ ಪ್ರತಿಜ್ಞಾ ಬದ್ದರಾಗಬೇಕು ಎಂದು ನುಡಿದರು.
ವಿಶ್ವ ಪ್ರಕೃತಿ ಸಂರಕ್ಷಣ ದಿನಾಚರಣೆಯ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಎನ್‍ಎಸ್‍ಎಸ್ ಮತ್ತು ಯೂತ್ ರೆಡ್‍ಕ್ರಾಸ್ ವಿಭಾಗಗಳಿಗೆ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿ ಸ್ವಾಗತಿಸಲಾಯಿತು.
ಕಾಲೇಜಿನ ಎನ್‍ಎಸ್‍ಎಸ್ ವಿಭಾಗದ ಸಂಚಾಲಕಿ ಪ್ರೊ.ನಿಶಾ.ಜಿ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಪ್ರೀತ್ ಸ್ವಾಗತಿಸಿ, ಯೂತ್ ರೆಡ್‍ಕ್ರಾಸ್ ವಿಭಾಗದ ಸಂಚಾಲಕ ಪ್ರೊ.ಅಭಿಷೇಕ್ ಕುಮಾರ್ ವಂದಿಸಿದರು. ಭುವನೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.