ಶಿಕ್ಷಕ ರಮಾನಂದ ನೂಜಿಪ್ಪಾಡಿಯವರಿಗೆ ಗುರುಶ್ರೇಷ್ಠ ಪ್ರಶಸ್ತಿ…

ಬಂಟ್ವಾಳ :ಬಹುಮುಖ ಪ್ರತಿಭೆಯ ಹಿರಿಯ ಶಿಕ್ಷಕ ರಮಾನಂದ ನೂಜಿಪ್ಪಾಡಿ ಇವರು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇದರ ವತಿಯಿಂದ ನೀಡಲಾಗುವ ಗುರುಶ್ರೇಷ್ಠ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ರಾಜ್ಯಾಧ್ಯಕ್ಷ ಮಧುನಾಯ್ಕ ಲಂಬಾಣಿ ತಿಳಿಸಿದ್ದಾರೆ.
ಹಿಂದಿ ಭಾಷಾ ಶಿಕ್ಷಕರಾಗಿ, ಶಿಕ್ಷಣ ಸಂಯೋಜಕರಾಗಿ, ಉಪಪ್ರಾಂಶುಪಾಲರಾಗಿ, ಕಾರ್ಯನಿರ್ವಹಿಸಿ ಅನುಭವಿಯಾಗಿರುವ ರಮಾನಂದರು ಪ್ರಸಕ್ತ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಟ್ವಾಳ ತಾಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿಯಾಗಿರುತ್ತಾರೆ. ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷರಾಗಿ, ರಾಜ್ಯ ಪ್ರೌಢ ಶಾಲಾ ಹಿಂದಿ ಭಾಷಾ ಶಿಕ್ಷಕ ಸಂಘದ ಅಧ್ಯಕ್ಷರಾಗಿ , ಬಂಟ್ವಾಳ ತಾಲೂಕು ಪ್ರಾಂಶುಪಾಲ ಮತ್ತು ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಲಯನ್ಸ್ ಕ್ಲಬ್‍ನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಇವರ ಸಾಧನೆಯನ್ನು ಗುರುತಿಸಿ 2021ನೇ ಸಾಲಿನ ಗುರುಶ್ರೇಷ್ಠ ರಾಜ್ಯ ಪ್ರಶಸ್ತಿಯನ್ನು ನೀಡಲಾಗುವುದು.
ಫೆ.27 ರಂದು ಕನ್ನಡ ಸಾಹಿತ್ಯ ಪರಿಷತ್ ಭವನ ಹಾಸನದಲ್ಲಿ ಏರ್ಪಡಿಸಲಾದ ಕನ್ನಡ ನುಡಿ ವೈಭವ 2022 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.