ಮುನಿಸೇಕೆ…
ಮುನಿಸೇಕೆ…
ಮುನಿಸಿದೇಕೆ ನನ್ನೊಲವೇ
ಮೊಗವ ತಿರುಹಿ ಕುಳಿತಿಹೆ
ಮೋಡ ಕವಿದ ಬಾನಿನಂತೆ
ಮನದಿ ನಿಶೆಯು ಕವಿದಿದೆ
ಮುದುಡಿ ಹೋದ ನಯನ ಕಂಡು
ತನುವು ನಡುಗಿ ಸೋತಿದೆ
ದೃಷ್ಟಿ ನೆಲವ ಸ್ಪರ್ಶಿಸಿರಲು
ಮತಿಗೆ ಮಂಕು ಕವಿದಿದೆ
ಚಿತ್ತವನ್ನು ಕೆದಕಿ ನೋಡೆ
ಏನು ಸುಳಿವು ದೊರಕದು
ಕರುಣೆ ತೋರಿ ನನ್ನ ಮೇಲೆ
ಕಾರಣವನು ಅರುಹೆಯಾ
ಮಾತಿನಲ್ಲಿ ಅರಳಿ ಬರಲಿ
ನಿನ್ನ ಮನದ ಬಯಕೆಯು
ಪೂರೈಸುವೆ ಒಂದೆ ಕ್ಷಣದಿ
ತೋಷದಿ ಮನ ನಲಿಯಲಿ
ರಚನೆ: ಡಾ. ವೀಣಾ ಎನ್ ಸುಳ್ಯ