ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ರಾಷ್ಟ್ರೀಯ ವಿಜ್ಞಾನ ದಿನಾಚರಣೆ…
ಪುತ್ತೂರು: ಸಮಾಜದಲ್ಲಿ ಕೃಷಿ ಕ್ಷೇತ್ರವು ವ್ಯಾಪಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಯುವ ತಂತ್ರಜ್ಞರು ಕಾರ್ಯಪ್ರವೃತ್ತರಾಗಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಐಎಸ್‍ಟಿಇ ಸ್ಟೂಡೆಂಟ್ ಚಾಪ್ಟರ್ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
2022ನೇ ಸಾಲಿನ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಧ್ಯೇಯ ವಾಕ್ಯ ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ವಿಧಾನ’ ಎನ್ನುವ ವಿಷಯದ ಮಹತ್ವವನ್ನು ವಿವರಿಸುತ್ತಾ ಸಮಾಜದ ಉನ್ನತಿಗಾಗಿ ಬಯೋಮೆಡಿಸಿನ್ ಸೇರಿದಂತೆ ವಿವಿಧ ವಿಜ್ಞಾನಗಳ ಏಕೀಕರಣವು ಅವಶ್ಯವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ತಾಂತ್ರಿಕ ಕಲ್ಪನೆಗಳನ್ನು ಸೂಕ್ತ ರೀತಿಯಲ್ಲಿ ಅಭಿವೃದ್ದಿಗೊಳಿಸಿ ಅದನ್ನೊಂದು ಸ್ಟಾರ್ಟ್‍ಅಪ್ ಆಗಿ ಪರಿವರ್ತಿಸಬೇಕು ಇದಕ್ಕಾಗಿ ಬೇಕಾದ ತಾಂತ್ರಿಕ ಹಾಗೂ ಆರ್ಥಿಕ ನೆರವನ್ನು ನೀಡುವುದಕ್ಕೆ ಸಂಸ್ಥೆಯು ಬದ್ದವಾಗಿದೆ ಎಂದರು.
ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಐಡಿಯಥಾನ್ ಎನ್ನುವ ಪರಿಕಲ್ಪನೆಯಡಿ ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಧ್ಯಯನವನ್ನು ಮಾಡಿ ಅದಕ್ಕೆ ಪರಿಹಾರದ ಮಾರ್ಗಸೂಚಿಯನ್ನು ತಯಾರಿಸಿದ್ದಾರೆ. ಅದನ್ನು ಅಭಿವೃದ್ಧಿಪಡಿಸಿ ಕೃಷಿ ಹಾಗೂ ಪರಿಸರ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತದೆ ಎಂದರು. ತಮ್ಮ ಪ್ರತಿಭೆಗಳನ್ನು ಒರೆಗೆ ಹಚ್ಚುವ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಮೂಲವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್, ಕಾರ್ಯಕ್ರಮ ಸಂಯೋಜಕ ಪ್ರೊ.ಸುನಿಲ್.ಕೆ.ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಐಡಿಯಥಾನ್ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಾದ ಅರ್ಪಿತ ಸ್ವಾಗತಿಸಿದರು, ಸಾಕ್ಷಿ ಶೆಟ್ಟಿ.ಪಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಸಮೀಕ್ಷಾ ವಂದನಾರ್ಪಣೆಗೈದರು. ಅನನ್ಯ.ಕೆ ಮತ್ತು ಆಕಾಶ್.ಪಿ ಕಾರ್ಯಕ್ರಮ ನಿರ್ವಹಿಸಿದರು.