ಉಕ್ರೇನ್‌ನಲ್ಲಿ ರಾಜ್ಯದ ವಿದ್ಯಾರ್ಥಿ ದುರ್ಮರಣಕ್ಕೆ ರಾಜ್ಯ ಸರಕಾರ ನೇರ ಹೊಣೆ- ಟಿ.ಎಂ.ಶಾಹಿದ್ ತೆಕ್ಕಿಲ್ ಆರೋಪ…
ಕುಶಾಲನಗರ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೇವಲ ಹೇಳಿಕೆಯಲ್ಲಿ ನಿರತರಾಗಿ ಯಾವುದೇ ಸೂಕ್ತ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳದ ಕಾರಣ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಉಕ್ರೇನ್ ನಲ್ಲಿ ಬಾಂಬ್ ದಾಳಿಗೆ ಸಿಲುಕಿ ಸಾವನ್ನಪ್ಪಬೇಕಾದ ದುಸ್ಥಿತಿ ಎದುರಾಯಿತು ಎಂದು ಕಾಂಗ್ರೆಸ್ ಮುಖಂಡ ಹಾಗೂ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಕೊಡಗು ಜಿಲ್ಲಾ ವೀಕ್ಷಕ ಟಿ.ಎಂ. ಶಾಹಿದ್ ತೆಕ್ಕಿಲ್ ಆರೋಪಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಭಾನ್ವಿತ ವಿದ್ಯಾರ್ಥಿ ಸಾವಿಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಬಿಜೆಪಿ ಸರಕಾರದ ವೈಫಲ್ಯವೇ ಕಾರಣ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಉಕ್ರೇನ್ ನಲ್ಲಿ ಯುದ್ದ ಪರಿಸ್ಥಿತಿ ಆರಂಭವಾದಾಗಿನಿಂದ ಅಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಮಸ್ಯೆ ತೀವ್ರಗೊಂಡಿತ್ತು. ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ರಾಜ್ಯ ಸರಕಾರ ಕೂಡ ಕೇಂದ್ರದ ಮೇಲೆ ಯಾವುದೇ ರೀತಿಯ ಒತ್ತಡ ಹೇರುವಲ್ಲಿ ವಿಫಲವಾಯಿತು. ಕೇವಲ ಪ್ರಚಾರಕ್ಕೆ ಸೀಮಿತವಾದ ರಾಜ್ಯದ ದಲ್ಲಾಳಿ ಸರಕಾರ ನವೀನ್ ಸಾವಿನ ನೈತಿಕ ಹೊಣೆ ಹೊರಬೇಕಿದೆ. ವಿದ್ಯಾರ್ಥಿಗಳ ರಕ್ಷಣೆಗೆ ನಾಲ್ವರು ಕೇಂದ್ರ ಸಚಿವರನ್ನು ನಿಯೋಜಿಸಿದ್ದೇವೆ ಎಂದು ಸಮರ್ಥಿಸಿಕೊಳ್ಳುವ ಪ್ರಧಾನಿ ಮೋದಿ ಅವರು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗದೆ ಇನ್ನು ಮುಂದಾದರೂ ವಿದೇಶದಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿ ಸುರಕ್ಷಿತವಾಗಿ ಕರೆತರಲು ಮುಂದಾಗಬೇಕಿದೆ ಎಂದರು. ಹಿಮಪಾತದಿಂದ ಮೃತಪಟ್ಟ ವಿರಾಜಪೇಟೆಯ ಯೋಧ ಅಲ್ತಾಫ್ ಕುಟುಂಬಕ್ಕೆ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯವನ್ನು ಸಂಸದರಾಗಲಿ, ಸ್ಥಳೀಯ ಬಿಜೆಪಿ ಮುಖಂಡರು ಮಾಡದಿರುವುದು ವಿಷಾದಕರ ಸಂಗತಿ. ಪಕ್ಷದ ಕಾರ್ಯಕರ್ತ ಮೃತಪಟ್ಟ ಸಂದರ್ಭ ಆತನ ಮನೆಗೆ ಭೇಟಿ ನೀಡುವ ಬಿಜೆಪಿಗರು ಯೋಧನ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದು ನಾಚಿಕೆಗೇಡಿನ ಸಂಗತಿ. ರಾಜಕೀಯ ವಿಷಬೀಜ ಬಿತ್ತಿ ಕೋಮು ಸಂಘರ್ಷ ಹತ್ತಿಕ್ಕುವ ಬದಲು ಯೋಧರ ಬಗ್ಗೆ ಮರುಕ ಪಡುವ ಮಾನವೀಯತೆಯನ್ನು ಬಿಜೆಪಿಗರು ಬೆಳೆಸಿಕೊಳ್ಳಬೇಕಿದೆ ಎಂದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೇವಲ ಮಾಧ್ಯಮಗಳಿಗೆ ಮಾತ್ರ ಸೀಮಿತವಾಗದೆ ತುರ್ತು ಪರಿಸ್ಥಿತಿ ಸಂದರ್ಭ ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಪ್ರಬುದ್ದತೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಕಾಂಗ್ರೆಸ್ ನಿಂದ ಡಿಜಿಟಲ್ ನೋಂದಣಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕೊಡಗು ಜಿಲ್ಲೆಯಲ್ಲಿ 50 ಸಾವಿರ ಹೊಸ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ. ಜಿಲ್ಲೆಯ ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ 100 ಮಂದಿ ಸಕ್ರಿಯ ಸದಸ್ಯರನ್ನು ಮಾಡುವ ಅಗತ್ಯವಿದೆ. ಆಯಾ ಬೂತ್ ಮಟ್ಟದ ನಾಯಕರು ಇದರ ಜವಾಬ್ದಾರಿ ಹೊತ್ತು ಶ್ರಮವಹಿಸಬೇಕಿದೆ.
ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ಗುರಿಮುಟ್ಟಲು ವಿಫಲರಾದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಗಂಭೀರ ಚಿಂತನೆ ಹರಿಸಿದ್ದಾರೆ. ಆದ್ದರಿಂದ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತಕುಮಾರ್, ಮಡಿಕೇರಿ ವಿಧಾನಸಭಾ ಕ್ಷೇತ್ರ ವೀಕ್ಷಕ ಪ್ರದೀಪ್ ರೈ ಪಾಂಬಾರು, ಪ್ರಮುಖರಾದ ಶೇಖ್ ಖಲೀಮುಲ್ಲಾ, ಫಿಲೋಮಿನಾ, ಕುಮುದಾ ಧರ್ಮಪ್ಪ ಇದ್ದರು.