ಭವ್ಯಶ್ರೀ ಕುಲ್ಕುಂದ ರಚನೆಯಲ್ಲಿ ಅರೆಭಾಷೆ ಯಕ್ಷಗಾನ ಪ್ರಸಂಗ ಸಿದ್ದ….
ಮಂಗಳೂರು: ಯಕ್ಷಗಾನ ಯುವ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರು ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ ಹಾಗೂ ತಾಳಮದ್ದಳೆಯ ಮೊದಲ ಪ್ರಯೋಗ ಕೂಡ ನಡೆಸಲಾಗಿದೆ.
ಅರೆಭಾಷೆಯಲ್ಲಿ ಯಕ್ಷಗಾನ, ತಾಳಮದ್ದಳೆ ಪ್ರಯೋಗ ಈಗಾಗಲೇ ನಡೆದಿದೆ. ಆದರೆ, ಪ್ರಸಂಗ ಸಾಹಿತ್ಯ ಕನ್ನಡದಲ್ಲಿದ್ದು ಅರೆಭಾಷೆಯಲ್ಲೇ ಪ್ರಸಂಗ ಸಾಹಿತ್ಯವೂ ದೊರೆಯಬೇಕು ಎಂಬ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಯೋಜನೆಯಂತೆ ಭವ್ಯಶ್ರೀ ಅವರು ಕನ್ನಡದಿಂದ ಐದು ಪ್ರಸಂಗಗಳನ್ನು ಅರೆಭಾಷೆಗೆ ಅನುವಾದಿಸುತ್ತಿದ್ದಾರೆ. ಈಗಾಗಲೇ ಶರಸೇತು ಬಂಧನ ಮತ್ತು ಪಂಚವಟಿ ಪ್ರಸಂಗದ ಅನುವಾದ ಪೂರ್ಣಗೊಂಡಿದೆ. ಈ ಪೈಕಿ ಶರಸೇತು ಬಂಧನ ಪ್ರಸಂಗ ‘ಬಾಣದ ಪಾಲ’ ಹೆಸರಿನಲ್ಲಿ ತಾಳಮದ್ದಳೆ ವಿಡಿಯೊ, ಆಡಿಯೊ ರೆಕಾರ್ಡಿಂಗ್ ನಡೆದಿದೆ.
ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರು, ನನ್ನ ಮೊದಲ ಗುರುಗಳಾದ ವಿಶ್ವವಿನೋದ ಬನಾರಿ ಅವರು ಅರೆಭಾಷೆಯಲ್ಲಿ ಪದ್ಯ ರಚನೆಗೆ ಪ್ರೋತ್ಸಾಹಿಸಿದ್ದು, ಗುರುಗಳಾದ ಗಣೇಶ ಕೊಲೆಕಾಡಿ ಅವರು ಛಂದಸ್ಸಿನ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಭಾಗವತರಾದ ಸುಬ್ರಾಯ ಸಂಪಾಜೆ ಭಾಷೆ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸರ್ವ ಸದಸ್ಯರು, ಜಬ್ಬಾರ್ ಸಮೊ ಅವರು ಪ್ರೋತ್ಸಾಹ ನೀಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಪ್ರಸಂಗ ಅನುವಾದ ಆರಂಭಿಸಿದ್ದು ಹೊಸ ಪ್ರಯೋಗಕ್ಕೆ ಇಳಿದಿರುವುದು ಸಂತಸ ನೀಡಿದೆ ಎಂದು ಹೇಳಿದ್ದಾರೆ.