ಗ್ರಾ. ಪಂ. ಚುನಾಯಿತ ಪ್ರತಿನಿಧಿಗಳ ಗೌರವಧನ,ಇತರ ಸೌಲಭ್ಯ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಮಂಜುನಾಥ ಭಂಡಾರಿ ಮನವಿ…

ಬೆಂಗಳೂರು: ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿಯವರು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳ ಗೌರವಧನ ಹೆಚ್ಚಿಸಿ, ಅವರಿಗೆ ಇತರ ಸೌಲಭ್ಯಗಳನ್ನು ಒದಗಿಸಲು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಮಂಜುನಾಥ ಭಂಡಾರಿಯವರು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಡಿದ ಮನವಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಆಡಳಿತದ ಚುನಾವಣೆಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮೀಸಲಾತಿ ಕ್ಷೇತ್ರಗಳಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಚುನಾಯಿತರಾದ ಪ್ರತಿನಿಧಿಗಳಿಗೆ ಯಾವುದೇ ರೀತಿಯ ಸವಲತ್ತುಗಳಾಗಲಿ ಅಥವಾ ನಿರೀಕ್ಷೆ ಮಟ್ಟದಲ್ಲಿರುವ ಗೌರವ ಧನ ಸಿಗದೇ ಇರುವುದು ಇದಕ್ಕೆ ಮುಖ್ಯ ಕಾರಣ. ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನವು ಕಳೆದ 5 ವರ್ಷಗಳಿಂದ ಹೆಚ್ಚಳವಾಗಿಲ್ಲ. ಈಗ ಅವರಿಗೆ ಸಿಗುವ ಗೌರವ ಧನ ಕೇವಲ 1,000 ರೂಪಾಯಿಗಳು.
ಚುನಾಯಿತ ಪ್ರತಿನಿಧಿಗಳು ಶೇಕಡ 100 ರಷ್ಟು ಗ್ರಾಮೀಣ ಪ್ರದೇಶದವರಾಗಿದ್ದು, ಅವರಿಗೆ ಯಾವುದೇ ಇತರ ಮೂಲ ಆದಾಯ ಇರುವುದಿಲ್ಲ. ಒಂದು ಬಾರಿ ಚುನಾಯಿತರಾಗಿ ಅಯ್ಕೆಯಾದ ನಂತರ ಸದಸ್ಯರು ತಮ್ಮ ಇತರ ಉದ್ಯೋಗ ಅಥವಾ ಕೆಲಸ-ಕಾರ್ಯಗಳಿಂದ ವಂಚಿತರಾಗಿ ಅವರ ಆರ್ಥಿಕ ಪರಿಸ್ಥಿತಿ ಅತ್ಯಂತ ದುಸ್ತರವಾಗುತ್ತದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೀಸಲಾತಿ ಪ್ರಕಾರ ಶೇಕಡಾ 50 ರಷ್ಟು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿ ಬರುವುದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಿದಲ್ಲಿ ಅವರು ಸಂಪೂರ್ಣವಾಗಿ ತಮ್ಮನ್ನು ತಾವು ಗ್ರಾಮೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಸಾರ್ವಜನಿಕರಿಗೆ ಉತ್ತರದಾಯಿತ್ವವನ್ನು ಹೊಂದಲು ಸಾಧ್ಯವಾಗುತ್ತದೆ.
ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ತಿಂಗಳಿಗೆ ಕನಿಷ್ಠ 10 ಸಾವಿರ ರೂಪಾಯಿಗಳಿಗೆ ಹೆಚ್ಚಿಸುವುದು, ಇತರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಅವರವರ ಕೆಲಸ ಕಾರ್ಯಗಳ ಅನುಗುಣವಾಗಿ ಗೌರವಧನವನ್ನು ಹೆಚ್ಚಿಸುವುದು, ಚುನಾಯಿತ ಪ್ರತಿನಿಧಿಗಳಿಗೆ ಜಿಲ್ಲಾ ಮಟ್ಟದಲ್ಲಿ ಓಡಾಡಲು ಉಚಿತ ಬಸ್ ಪಾಸ್ ಒದಗಿಸುವುದು, ಆರೋಗ್ಯ ವಿಮೆ ಮತ್ತು ಉಚಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸುವುದು, 5 ವರ್ಷಗಳನ್ನು ಪೂರ್ಣಗೊಳಿಸಿದ ಚುನಾಯಿತ ಪ್ರತಿನಿಧಿಗಳಿಗೆ ಪಿಂಚಣಿ ಸೌಲಭ್ಯ ಒದಗಿಸುವುದು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದ ನಿವೇಶನ ರಹಿತ ಚುನಾಯಿತ ಪ್ರತಿನಿಧಿಗಳಿಗೆ ನಿವೇಶನ ಸೌಲಭ್ಯವನ್ನು ನೀಡಬೇಕೆಂದು ಅವರು ಮುಖ್ಯಮಂತ್ರಿಗಳನ್ನು ಕೋರಿಕೊಂಡರು.

Sponsors

Related Articles

Back to top button