ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವಿಶ್ವ ಮಹಿಳಾ ದಿನಾಚರಣೆ…
ಪುತ್ತೂರು: ಉನ್ನತ ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆಯು ಮಹಿಳಾ ಸಬಲೀಕರಣಕ್ಕೆ ಪ್ರಮುಖ ಅಸ್ತ್ರವಾಗಿದೆ ಎಂದು ಪುತ್ತೂರು ನಗರಸಭೆಯ ಉಪಾಧ್ಯಕ್ಷೆ ವಿದ್ಯಾ.ಆರ್.ಗೌರಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗ ಮತ್ತು ಕಾಲೇಜು ಆಂತರಿಕ ದೂರು ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನದ ಅಂಗವಾಗಿ ಶ್ರೀರಾಮ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಹಿಳೆಯರ ಸಬಲೀಕರಣಕ್ಕೆ ಮಹಿಳೆಯು ತನ್ನ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡಿರಬೇಕು, ಕುಟುಂಬದ ಬೆಂಬಲವನ್ನು ಪಡೆಯಬೇಕು, ಸಮಾಜ ಅವಳನ್ನು ಅರ್ಥೈಸಿಕೊಂಡು ಗೌರವವನ್ನು ಹೊಂದಿರಬೇಕು ಮತ್ತು ಮಹಿಳಾ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೂ ಅದರ ಬೆಂಬಲವನ್ನು ಅವಳು ಪಡೆದುಕೊಳ್ಳಬೇಕು ಎಂದರು. ಮಹಿಳೆಯರು ಸಮಾಜದಲ್ಲಿ ತನಗಾಗುತ್ತಿರುವ ತಾರತಮ್ಯ ಮತ್ತು ಅಸಮಾನತೆಗಳ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ.ಸೌಮ್ಯ.ಎನ್.ಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕಿ ಎಂಬಿಎ ವಿಭಾಗದ ಪ್ರೊ.ರೇಶ್ಮಾ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರು, ಮಹಿಳಾ ಉಪನ್ಯಾಸಕಿಯರು ಮತ್ತು ಸಿಬ್ಬಂದಿಗಳು ಸಮಾರಂಭದಲ್ಲಿ ಹಾಜರಿದ್ದರು.
ಕೆ.ಕೆ.ಶಿವಾನಿ ಸ್ವಾಗತಿಸಿ, ಪಲ್ಲವಿ.ಎ.ಟಿ ಅತಿಥಿಗಳನ್ನು ಪರಿಚಯಿಸಿದರು. ವರ್ಷಾ ಪ್ರಕಾಶ್ ವಂದನಾರ್ಪಣೆಗೈದರು. ಚೊಂದಮ್ಮ.ಎಂ.ಸಿ ಕಾರ್ಯಕ್ರಮ ನಿರ್ವಹಿಸಿದರು.