ಭಾಷಾಂತರ ತರಬೇತಿ ಶಿಬಿರದ ಸಮಾರೋಪ…

ಬಂಟ್ವಾಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾಷಾಂತರ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅನುವಾದ ಸಾಂಸ್ಕೃತಿಕ ಸೀಮೆಗಳನ್ನು ದಾಟುವ ಕೆಲಸ, ಅನುವಾದಕನಿಗೆ ವಿಶ್ವಾಸ, ವ್ಯಾಪಕ ಅಧ್ಯಯನ, ಮೂಲ ಹಾಗೂ ಅನುವಾದಿಸುವ ಭಾಷೆಗಳ ಸಂಸ್ಕೃತಿಯ ಪರಿಚಯ ಅಗತ್ಯ ಎಂದು ಹೇಳಿದರು. ಅನುವಾದ ಎನ್ನುವುದು ಒಂದು ಮರು ಸೃಷ್ಟಿ ಹಾಗೂ ಕೃತಿಗೆ ಹೊಸ ಬದುಕನ್ನು ನೀಡುವ ಸೃಜನಶೀಲ ಕಾರ್ಯ ಎಂದು ಅವರು ಅಭಿಪ್ರಾಯಿಸಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ಡಾ. ಸತೀಶ್ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಸಂಯೋಜಕ ಆಂಗ್ಲ ವಿಭಾಗ ಮುಖ್ಯಸ್ಥ ನಂದ ಕಿಶೋರ್ ಎಸ್ ಉಪಸ್ಥಿತರಿದ್ದರು. ಚಂದ್ರಪ್ರಭ ನಿರೂಪಿಸಿದರು. ಆಶ್ವಿತ ವಂದಿಸಿದರು.

Related Articles

Back to top button