ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವಾರ್ಷಿಕೋತ್ಸವ VIBGYOR – 2022…

ಪುತ್ತೂರು: ಜ್ಞಾನ ಎನ್ನುವುದು ಅತೀ ಶಕ್ತಿಶಾಲಿ ಅಸ್ತ್ರ ಇದರಿಂದ ನಾವು ಯಾರನ್ನೂ ಯಾವುದನ್ನೂ ಮಣಿಸುವುದಕ್ಕೆ ಸಾಧ್ಯವಿದೆ ಎಂದು ಸೋನಾ ಗ್ರೂಪ್ ಬೆಂಗಳೂರು ಇದರ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಜ್ಞನಾರಾಯಣ ಕಮ್ಮಾಜೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕೋತ್ಸವ VIBGYOR – 2022 ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಜಗತ್ತನ್ನೇ ಬೆರಗಾಗಿಸುವ ಪ್ರತಿಭೆಯಿದೆ. ನಾನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದಲ್ಲ, ನಾನು ಗ್ರಾಮಾಂತರದಲ್ಲಿ ಓದಿದವ ಎನ್ನುವುದು ಕೇವಲ ಮನಸ್ಸಿನ ಭಾವನೆ. ಈ ಕೀಳರಿಮೆಯಿಂದ ಹೊರಬಂದಾಗ ಎಲ್ಲರೂ ತಿರುಗಿ ನೋಡುವ ರೀತಿಯಲ್ಲಿ ಬೆಳವಣಿಗೆಯನ್ನು ಕಾಣಬಹುದು ಎಂದು ಅವರು ಹೇಳಿದರು. ವರ್ತನೆ ಮತ್ತು ನಾಯಕತ್ವವನ್ನು ಯಾರಿಂದಲೂ ಎರವಲು ಪಡೆಯುವುದು ಸಾಧ್ಯವಿಲ್ಲ ಬದಲಾಗಿ ನಾಯಕತ್ವ, ಶಿಸ್ತು ಮತ್ತು ಸಂವಹನ ಕಲೆಯನ್ನು ನಮಗೆ ನಾವೇ ಪರಿಣಾಮಕಾರಿಯಾಗಿ ಬೆಳೆಸಿಕೊಂಡಾಗ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ದೇಶದಲ್ಲಿ ತಕ್ಷಣಕ್ಕೆ ಆಗಬೇಕಾದ ಬದಲಾವಣೆಯೆಂದರೆ ಶಿಕ್ಷಣ ಕ್ಷೇತ್ರವನ್ನು ಎತ್ತರಕ್ಕೇರಿಸುವುದರ ಮೂಲಕ ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಮಹಾತ್ಮರ ಕನಸಿನ ಭಾರತದ ನಿರ್ಮಾಣ ಮಾಡುವುದು ಎಂದು ಹೇಳಿದರು. ತಪ್ಪು ಇತಿಹಾಸವನ್ನು ಬೋಧಿಸುವ ಕೆಲಸ ನಿರಂತರವಾಗಿ ನಡೆದಿದೆ. ಇದರ ಬದಲು ಸ್ವಾಭಿಮಾನ ನಿರ್ಮಾಣ ಮಾಡುವ ಪಠ್ಯಗಳನ್ನು ಬೋಧಿಸಬೇಕು. ದೇಶಕ್ಕೋಸ್ಕರ ಬದುಕುವ ರಾಷ್ಟ್ರಪ್ರೇಮಿಗಳನ್ನು ನಿಮಾಣ ಮಾಡುವ ಅಗ್ನಿಪಥದ ಬಗ್ಗೆ ವಿವರಿಸಿದ ಅವರು ಇದರ ಬಗ್ಗೆ ಯುವ ಜನತೆ ಆಸಕ್ತಿ ವಹಿಸಬೇಕೆಂದು ಹೇಳಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಪರೀಕ್ಷೆಯಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ 3ನೇ ರ್ಯಾಂಕ್ ಗಳಿಸಿದ ರಂಜನ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ 8ನೇ ರ್ಯಾಂಕ್ ಗಳಿಸಿದ ಕೃತಿಕಾ.ಕೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ತಮ್ಮ ವೈಯಕ್ತಿಕ ನೆಲೆಯಲ್ಲಿ ಚಿನ್ನದ ನಾಣ್ಯವನ್ನಿತ್ತು ಗೌರವಿಸಿದರು. ಶೈಕ್ಷಣಿಕವಾಗಿ ಪ್ರತಿ ವಿಭಾಗದಲ್ಲಿಯೂ ಅತ್ಯುತ್ತಮ ಸಾಧನೆಯನ್ನು ತೋರಿದ ಪ್ರತಿಭಾವಂತರಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅನನ್ಯ ಸಾಧನೆಯನ್ನು ಮಾಡಿದ ಸಾಧಕರನ್ನು ಗೌರವಿಸಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ, ಖಜಾಂಚಿ ಅಚ್ಯುತ ನಾಯಕ್, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ.ಬಿ, ಡಾ.ಯಶೋಧಾ ರಾಮಚಂದ್ರ, ಸಂತೋಷ್ ಕುತ್ತಮೊಟ್ಟೆ, ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೀಜಾ ಶೆಟ್ಟಿ ಮತ್ತು ಧನುಶ್ ಕೇವಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಶ್ರೀಮತಿ ರೂಪಲೇಖಾ, ಪ್ರತಿಭಾವಂತ ದತ್ತಿ ನಿಧಿಯನ್ನು ನೀಡಿದ ವಿವೇಕಾನಂದ ಪದವಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಎ.ವಿ ನಾರಾಯಣ, ಪ್ರೊ.ವತ್ಸಲಾ ರಾಜ್ಞಿ, ಕಾಲೇಜಿನ ಪೇರೆಂಟ್ ರಿಲೇಶನ್ ಸೆಲ್ಲಿನ ಉಪಾಧ್ಯಕ್ಷೆ ಶಶಿಕಲಾ, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ವಾರ್ಷಿಕ ವರದಿಯನ್ನು ಮಂಡಿಸಿದರು. ಶಿಫಾಲಿ ರೈ ಸ್ವಾಗತಿಸಿ, ಶ್ರೀಜಾ ಶೆಟ್ಟಿ ವಂದಿಸಿದರು. ದಿಶಾ ಮತ್ತು ಚೈತ್ರಾ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button