“ಗಾಂಧಿ ಗ್ರಾಮ ಪುರಸ್ಕಾರ” ಯೋಜನೆಯನ್ನು ಮುಂದುವರಿಸುವಂತೆ ಮಂಜುನಾಥ ಭಂಡಾರಿ ಅವರಿಂದ ಒತ್ತಾಯ…
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಶೂನ್ಯವೇಳೆಯ ಪ್ರಶ್ನೆಯಾಗಿ “2019-20ನೇ ಸಾಲಿನಿಂದ ನಿಂತು ಹೋಗಿರುವ “ಗಾಂಧಿ ಗ್ರಾಮ ಪುರಸ್ಕಾರ” ಯೋಜನೆಯನ್ನು ಪುನಃ ಮುಂದುವರಿಸುವ ಕುರಿತಾಗಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ಪ್ರಸ್ತಾಪಿಸಿದರು.
ಬಳಿಕ ಈ ವಿಷಯವಾಗಿ ಮಾನ್ಯ ಮುಖ್ಯಮಂತ್ರಿಯವರಿಗೆ ಪತ್ರದ ಮುಖಾಂತರ ಮನವಿ ಮಾಡಿದರು.
ಶೂನ್ಯ ವೇಳೆಯಲ್ಲಿ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ರಾಜ್ಯದ ಪಂಚಾಯತ್‍ರಾಜ್ ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಮತ್ತಷ್ಟು ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ವೇಗವನ್ನು ಹೆಚ್ಚಿಸಲು ಪಂಚಾಯತ್‍ರಾಜ್ ಸಂಸ್ಥೆಗಳಿಗೆ ಹಲವಾರು ಪ್ರೋತ್ಸಾಹಕ ಕ್ರಮಗಳಲ್ಲಿ ಒಂದಾದ ಗಾಂಧಿ ಗ್ರಾಮ ಪುರಸ್ಕಾರ ನೀಡುವ ಯೋಜನೆಯನ್ನು 2013-14ರಲ್ಲಿ ಪ್ರಾರಂಭಿಸಲಾಗಿತ್ತು. ರಾಜ್ಯದ ಪ್ರತೀ ತಾಲೂಕಿಗೆ ಒಂದು ಗ್ರಾಮ ಪಂಚಾಯತಿಯನ್ನು ಗುರುತಿಸುವ ಈ ಯೋಜನೆಯಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತಿಗೆ 5ಲಕ್ಷ ರೂಪಾಯಿಗಳ ಪ್ರೋತ್ಸಾಹಕ ಅನುದಾನವನ್ನು ನೀಡಲಾಗುತ್ತಿದ್ದು, ಕೋವಿಡ್-19 ಹಿನ್ನಲೆಯಲ್ಲಿ 2019-20ರಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಆಯ್ಕೆ ಮಾಡಿದ ಗ್ರಾಮ ಪಂಚಾಯತಿಗಳಿಗೆ ಅನುದಾನ ನೀಡಿರುವುದಿಲ್ಲ. ಆರ್ಥಿಕ ವರ್ಷ 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.