ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ…

ಪುತ್ತೂರು: ಮನುಷ್ಯ ಸಮಾಜಜೀವಿ, ಆದ್ದರಿಂದ ವಿಚಾರ ಹಾಗೂ ಭಾವನೆಗಳ ವಿನಿಮಯ ವ್ಯವಹಾರ ದೃಷ್ಟಿಯಿಂದ ಮಾತ್ರವಲ್ಲ ವೈಯಕ್ತಿಕ ಸಂತೋಷಗಳಿಗೂ ಆವಶ್ಯಕ ಮತ್ತು ಅನಿವಾರ್ಯ. ಈ ದೃಷ್ಟಿಯಿಂದ ಸಹಮಿಲನ ಕಾರ್ಯಕ್ರಮಗಳು ಹೆಚ್ಚು ಸೂಕ್ತವೆನಿಸುತ್ತವೆ ಎಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉದ್ಯಮಿ ನರಸಿಂಹ ಪೈ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀ ರಾಮ ಸಭಾಭವನದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊರಗಡೆ ಆಗಾಗ ಭೇಟಿಯಾಗುತ್ತಿದ್ದರೂ ನಾವು ಕಲಿತ ಸಂಸ್ಥೆಗಳಲ್ಲಿ ಈ ರೀತಿಯಾಗಿ ಒಟ್ಟಾಗಿ ಗುರುಹಿರಿಯರೊಂದಿಗೆ ಸಂವಹನ ನಡೆಸುವುದು ಆನಂದದಾಯಕವಾಗಿರುತ್ತದೆ ಎಂದು ಅವರು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ವಿದ್ಯಾರ್ಥಿಗಳ ಏಳಿಗೆಗಾಗಿ ಕಾಲೇಜು ಸಾಕಷ್ಟು ಚಟುವಟಿಕೆಗಳನ್ನು ಮಾಡುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಸಚ್ಚಾರಿತ್ರ್ಯವಂತೆ ನಾಗರಿಕರಾಗುವುದಕ್ಕೆ ಅಗತ್ಯವಾದ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ನೀವು ಕಲಿತ ಸಂಸ್ಥೆಯ ಬಗ್ಗೆ ಉತ್ತಮ ಅಭಿಮಾನವನ್ನು ಬೆಳೆಸಿಕೊಂಡು ಇದರ ಏಳಿಗೆಗೆ ಸಹಕರಿಸುವಂತೆ ಅವರು ಹಿರಿಯ ವಿದ್ಯಾರ್ಥಿಗಳಲ್ಲಿ ವಿನಂತಿಸಿದರು.
ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ನವೀನ್‍ಕೃಷ್ಣ ವಂದಿಸಿದರು. ವಿದ್ಯಾರ್ಥಿನಿ ಹಿತೈಷಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
