ಶ್ರೀನಿವಾಸ ವಿಶ್ವ ವಿದ್ಯಾಲಯ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನೋಲಜಿ ಮುಕ್ಕದ ವತಿಯಿಂದ ಕಡಲ ತೀರ ಸ್ವಚ್ಚತಾ ಅಭಿಯಾನ…
ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾಲಯ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನೋಲಜಿ ಮುಕ್ಕಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಇವರ ಸಹಯೋಗದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಜೂ. 5 ರಂದು ಸಸಿಹಿತ್ಲು ಕಡಲ ತೀರದ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಂಜಿನಿಯರಿಂಗ್ ಮೊದಲ ವರ್ಷದಲ್ಲಿ ಓದುತ್ತಿರುವ ಸುಮಾರು 250 ವಿದ್ಯಾರ್ಥಿಗಳು ಜೊತೆಗೂಡಿ ಸಸಿಹಿತ್ಲು ಕಡಲ ತೀರದ ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿ ಸ್ವಚ್ಚ ಮಾಡಿದರು. ಸಸಿಹಿತ್ಲು ಗ್ರಾಮದ ಜನರಿಗೂ ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಜೂ. 05 ರಂದು ಸಾಯಂಕಾಲ ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನ ಮಾಡಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ವಿಜಯ ಹೆಗಡೆ, ಪರಿಸರ ಅಧಿಕಾರಿ ಡಾ. ರವಿ, ಸಹ ಪರಿಸರ ಅಧಿಕಾರಿ ಡಾ. ಮಂಜುರವರು ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಪರಿಸರ ಜಾಗೃತಿ ಮೂಡಿಸಿದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೆಲಸವನ್ನು ಸಸಿಹಿತ್ಲು ಗ್ರಾಮಸ್ಥರು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಮುಕ್ಕ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರೋನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ನವೀನ್ ಕುಮಾರ್ ಜೆ.ಆರ್, ಪ್ರೊ. ಕೃಷ್ಣ ಕೌಶಿಕ್, ವಾರ್ಡನ್ ಉಮೇಶ್, ಮಾಲತಿ, ಸುಜಾತ ಇವರುಗಳು ಭಾಗವಹಿಸಿದ್ದರು. ಪರಿಸರ ನಿಯಂತ್ರಣ ಮಂಡಳಿಯ ವಿವಿಧ ವಿಭಾಗದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದ್ದರು. ಡಾ. ಪ್ರವೀಣ್ ಬಿ ಎಂ. ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.