ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಇಂಜಿನಿಯರ್ಸ್ ಡೇ ಆಚರಣೆ…

ಪುತ್ತೂರು: ನಮ್ಮ ನಾಡಿನ ಹೆಮ್ಮೆಯ ಪುತ್ರ, ದೇಶ ಕಂಡ ಅಪ್ರತಿಮ ವಿಜ್ಞಾನಿ ಸರ್.ಎಂ.ವಿಶ್ವೇಶ್ವರಯ್ಯನವರು ಕಲಿಸಿಕೊಟ್ಟ ಶ್ರಮ ಮತ್ತು ಪ್ರಾಮಾಣಿಕತೆಯ ಪಾಠವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ತನ್ಮೂಲಕ ದೇಶದ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಪುತ್ತೂರು ನಗರಸಭೆಯ ಆಯುಕ್ತ ಮಧು.ಎಸ್.ಮನೋಹರ್ ಹೇಳಿದರು.
ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಐಎಸ್‍ಟಿಇ ಘಟಕ ಮತ್ತು ಕಾಲೇಜಿನ ಇನ್ಟಿಟ್ಯೂಶನ್ ಇನ್ನೋವೇಶನ್ ಕೌನ್ಸಿಲ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಇಂಜಿನಿಯರ್ಸ್ ಡೇ ಆಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸರ್.ಎಂ.ವಿಯವರ ವಿಚಾರಧಾರೆಯನ್ನು ದಿಕ್ಸೂಚಿಯನ್ನಾಗಿಸಿಕೊಂಡು ದೇಶ ಮುನ್ನಡೆಯುತ್ತಿದೆ ಎಂದ ಅವರು ಇವರ ದೂರದರ್ಶಿತ್ವವುಳ್ಳ ಯೋಚನೆಗಳು ಮತ್ತು ಯೋಜನೆಗಳು ಅವರ ಬುದ್ಧಿವಂತಿಕೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು. ದಿನದಿಂದ ದಿನಕ್ಕೆ ಬದಲಾಗುವ ತಂತ್ರಜ್ಞಾನವನ್ನು ಇಂಜಿನಿಯರುಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಂಡು ಸಮಾಜದ ಉನ್ನತಿಗೆ ಮತ್ತು ರಾಷ್ಟ್ರದ ಏಳಿಗೆಗೆ ಶ್ರಮಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ, ಅದಮ್ಯ ಚೇತನ, ಕ್ರಮನಿಷ್ಟವಾದ ಜೀವನ ಶೈಲಿ, ದೇಶಕ್ಕಾಗಿ ಕೆಲಸ ಮಾಡುವ ತುಡಿತ ಇವುಗಳಿಂದಾಗಿ ಸರ್.ಎಂ.ವಿಶ್ವೇಶ್ವರಯ್ಯನವರು ದೇಶದ ಇತಿಹಾಸದಲ್ಲಿ ಹೊಸ ಆಯಾಮವನ್ನೇ ಹುಟ್ಟುಹಾಕಿದರು ಎಂದು ಹೇಳಿದರು. ಉತ್ತಮವಾದ ಕಾರ್ಯಯೋಜನೆಯನ್ನು ತಯಾರಿಸಿ ಅದನ್ನು ಸರಿಯಾಗಿ ಅನುಷ್ಠಾನಗೊಳಿಸುವವನು ಮಾತ್ರ ಶ್ರೇಷ್ಟ ಇಂಜಿನಿಯರ್ ಆಗಬಲ್ಲ ಎಂದರು.
ಕಾಲೇಜಿನ ಐಎಸ್‍ಟಿಇ ಘಟಕದ ಸಂಯೋಜಕ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ಸ್ವಾಗತಿಸಿದರು. ಡಾ.ಆನಂದ್.ವಿ.ಆರ್ ವಿಶ್ವೇಶ್ವರಯ್ಯನವರ ಸಾಧನೆಯ ಬಗ್ಗೆ ಮಾಹಿತಿ ನೀಡಿದರು ವಿದ್ಯಾರ್ಥಿನಿ ಭವಾನಿ ವಂದಿಸಿದರು. ಪಲ್ಲವಿ ಕಾರ್ಯಕ್ರಮ ನಿರ್ವಹಿಸಿದರು.

