ಯಕ್ಷಾಂಗಣ ರಾಜ್ಯೋತ್ಸವ – ಗೌರವ ಪ್ರಶಸ್ತಿಗಳಿಗೆ ಯಾದವ ಕೋಟ್ಯಾನ್, ಮಹಾಬಲ ಶೆಟ್ಟಿ ಆಯ್ಕೆ…

ಹನ್ನೊಂದನೇ ವರ್ಷದ ನುಡಿ ಹಬ್ಬದಲ್ಲಿ ಪ್ರಶಸ್ತಿ ಪ್ರದಾನ...

ಮಂಗಳೂರು: ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ. ಡಾ.ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ, ಹನ್ನೊಂದನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಇದೇ ನವೆಂಬರ 19 ರಿಂದ 25 ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಜರಗಲಿದೆ.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾ ಪೋಷಕರಿಗಾಗಿ ನೀಡಲಾಗುವ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ಕ್ಕೆ 2023 ನೇ ಸಾಲಿಗೆ ಉದ್ಯಮಿ – ಸಮಾಜ ಸೇವಕ ಯಾದವ ಕೋಟ್ಯಾನ್ ಪೆರ್ಮುದೆ ಮತ್ತು ಕಲಾವಿದರಿಗಾಗಿಯೆ ಇರುವ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಗೆ ಯಕ್ಷಗಾನ ಅರ್ಥದಾರಿ – ಹರಿದಾಸ ಮಹಾಬಲ ಶೆಟ್ಟಿ ಕೂಡ್ಲು ಆಯ್ಕೆಯಾಗಿದ್ದಾರೆ.

ಯಾದವ ಕೋಟ್ಯಾನ್ ಪೆರ್ಮುದೆ:
ಬಜ್ಪೆ ಬಳಿಯ ಪೆರ್ಮುದೆ ಕನ್ನಿಕಾ ನಿಲಯ ನಿವಾಸಿ ಯಾದವ ಕೋಟ್ಯಾನ್ ತಮ್ಮ ‘ದಿವ್ಯ ರೂಪ ಕನ್ಸ್ಟ್ರಕ್ಷನ್’ ಮೂಲಕ ಉದ್ಯಮ ರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದವರು. ಸ್ವಂತ ಪರಿಶ್ರಮದಿಂದ ಮೇಲೆ ಬಂದ ಸಾಹಸಿ. ಮೇ 5,1964 ರಲ್ಲಿ ನೇಮು ಪೂಜಾರಿ ಹಾಗೂ ಕಮಲ ದಂಪತಿಗೆ ಜನಿಸಿದ ಅವರು ಸಣ್ಣಪುಟ್ಟ ಗುತ್ತಿಗೆದಾರರಾಗಿ ಬದುಕು ಕಟ್ಟಿಕೊಂಡು ಮುಂದೆ ಎಂ.ಆರ್‌.ಪಿ.ಎಲ್., ಒ‌.ಎನ್.ಜಿ.ಸಿ., ಎಸ್.ಇ.ಝಡ್ ಗುತ್ತಿಗೆಗಳನ್ನು ವಹಿಸಿ ಯಶಸ್ಸಿನ ಶಿಖರವೇರಿದರು.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಯಾದವ ಕೋಟ್ಯಾನ್ ಅವರ ಸೇವೆ ಅನುಪಮ. ಬರಿಗಾಲಲ್ಲಿ ನಡೆದು ನಿರಂತರ ಮೂರು ದಶಕಗಳ ಕಾಲ ಶಬರಿಮಲೆ ಯಾತ್ರೆ ಕೈಗೊಂಡ ಅವರು 1982ರಿಂದ ಪ್ರತಿ ವರ್ಷ 20ಕ್ಕಿಂತಲೂ ಹೆಚ್ಚು ಭಕ್ತರನ್ನು ಶಬರಿಮಲೆ ಯಾತ್ರೆ ಮಾಡಿಸುವ ಸಹೃದಯಿ. ಪೆರ್ಮುದೆ ಗ್ರಾಮ ಬಿಲ್ಲವ ಸಮಾಜದ ಮೂರನೇ ಗುರಿಕಾರರಾಗಿ, ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿ, ಕನ್ನಿಕಾ ನಿಲಯ ಮೂಲ ಬ್ರಹ್ಮ ಸ್ಥಾನದ ಅಧ್ಯಕ್ಷರಾಗಿ ದುಡಿದವರು. ನೀರು ಪೂರೈಕೆ,ಅಕ್ಕಿ ವಿತರಣೆ, ಹೈನುಗಾರಿಕೆ, ಧಾರ್ಮಿಕ ಕ್ಷೇತ್ರಗಳಿಗೆ ದೇಣಿಗೆ, ಶೈಕ್ಷಣಿಕ ನೆರವು ಇವೆಲ್ಲ ಅವರ ಸೇವಾ ಪ್ರಕಲ್ಪಗಳು.
ಉತ್ತಮ ಯಕ್ಷಗಾನ ಮತ್ತು ನಾಟಕ ಕಲಾವಿದರಾಗಿರುವ ಯಾದವರು ಪೆರ್ಮುದೆ ಶ್ರೀ ಶಾರದಾ ಯಕ್ಷಗಾನ ಮಂಡಳಿಯ ಸದಸ್ಯರು. ತಮ್ಮ ಕನ್ನಿಕಾ ನಿಲಯದಲ್ಲಿ ವರ್ಷಂಪ್ರತಿ ಕಟೀಲು, ಧರ್ಮಸ್ಥಳ, ಸುಂಕದಕಟ್ಟೆ, ಕೊಲ್ಲೂರು, ಮುಂಡ್ಕೂರು, ರಾಮಚಂದ್ರಾಪುರ, ಪಾವಂಜೆ ಮೇಳಗಳ ಸೇವೆಯಾಟಗಳನ್ನು ಮಾಡಿಸುತ್ತಿರುವುದು ಅವರ ಕಲಾ ಪ್ರೇಮಕ್ಕೆ ಸಾಕ್ಷಿ. ಶನಿ ಕಥೆಯೇ ಮೊದಲಾದ ತಾಳಮದ್ದಳೆ ಕೂಟಗಳನ್ನೂ ನಡೆಸಿದ್ದಾರೆ. ಯಕ್ಷ ಕೌಮುದಿ, ಯಕ್ಷಕಲಾ ರತ್ನ, ಕಲಾ ಶ್ರೀ ಚೂಡಾಮಣಿ, ಕಲಾಪೋಷಕ ಪುರಸ್ಕಾರ ಇತ್ಯಾದಿ ಗೌರವಗಳು ಅವರಿಗೆ ಲಭಿಸಿವೆ.

ಮಹಾಬಲ ಶೆಟ್ಟಿ ಕೂಡ್ಲು:
ವೃತ್ತಿಯಲ್ಲಿ ವಕೀಲರಾದ ಕೂಡ್ಲು ಮಹಾಬಲ ಶೆಟ್ಟರು ಯಕ್ಷಗಾನ, ಹರಿಕಥೆ, ತಾಳಮದ್ದಳೆ ಹಾಗೂ ಪುರಾಣ ವಾಚನ ಕ್ಷೇತ್ರಗಳಲ್ಲಿ ಪರಿಣತರು. ಕಾಸರಗೋಡು ಜಿಲ್ಲೆಯ ಕೂಡ್ಲು ಗ್ರಾಮದಲ್ಲಿ 1944 ನವಂಬರ್ 29ಕ್ಕೆ ಜನಿಸಿದ ಅವರ ತಂದೆ ದಿವಂಗತ ಬಳ್ಳೂರು ಗುತ್ತು ರಾಮಯ್ಯ ಶೆಟ್ಟಿ; ತಾಯಿ ಬಿ.ದೇವಕಿ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪಿಯುಸಿ ಕಲಿತು ಧಾರವಾಡ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಗಳಿಸಿದ ಅವರು ಮಂಗಳೂರಿನ ಎಸ್‌.ಡಿ.ಎಂ. ಕಾನೂನು ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದ್ದರು. 1963 ರಲ್ಲಿ ಕೇರಳ ಸರಕಾರದ ನ್ಯಾಯಾಂಗ ಇಲಾಖೆ ಸೇರಿ 20 ವರ್ಷ ಸರಕಾರಿ ಸೇವೆ ಮಾಡಿ ಸ್ವಯಂ ನಿವೃತ್ತಿ ಪಡೆದರು. ಕಾಸರಗೋಡಿನಲ್ಲಿ 3 ವರ್ಷ ವಕೀಲಿ ವೃತ್ತಿ ಕೈಗೊಂಡು, ಬಳಿಕ ಮಂಗಳೂರಿಗೆ ಬಂದು ಆರು ವರ್ಷ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸಿದರು. ಹತ್ತು ವರ್ಷ ಕಾಲ ತಾನು ಕಲಿತ ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಗೌರವ ಉಪನ್ಯಾಸಕರಾಗಿಯೂ ದುಡಿದರು.
ಹವ್ಯಾಸಿ, ಯಕ್ಷಗಾನ ಕಲಾವಿದನಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ನಾಟಕ ರಂಗ ಮತ್ತು ಸಾಹಿತ್ಯ ಕ್ಷೇತ್ರದಲ್ಲೂ ಕೈಯಾಡಿಸಿದ ಶೆಟ್ಟರು 1971ರಲ್ಲಿ ಹರಿಕಥಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ದಿ. ಶೇಣಿ ಗೋಪಾಲಕೃಷ್ಣ ಭಟ್ಟರು ಅವರ ಹರಿಕಥಾ ಗುರುಗಳು. ‘ದೇವಕಿತನಯ ಕೂಡ್ಲು’ ಎಂಬ ಅಂಕಿತ ನಾಮದಲ್ಲಿ ಮಹಾಬಲ ಶೆಟ್ಟರು ನೂರಾರು ಹರಿ ಕೀರ್ತನೆಗಳನ್ನು ನಡೆಸಿಕೊಟ್ಟರು. ಮಂಗಳೂರಿನಲ್ಲಿ ಹರಿಕಥಾ ಪರಿಷತ್ ಸ್ಥಾಪಿಸಿ ಅದರ ಮೂಲಕ ವಿವಿಧೆಡೆ ಹರಿಕಥಾ ಸಪ್ತಾಹಗಳನ್ನು ಆಯೋಜಿಸಿದರು. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿದ್ದಲ್ಲದೆ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲೂ ಗುರುತಿಸಿಕೊಂಡರು.
ಬ್ರಹ್ಮೈಕ್ಯರಾದ ಶ್ರೀ ಕೊಲ್ಯ ಮಠಾಧೀಶರಿಂದ ‘ಕೀರ್ತನ ಕೇಸರಿ’ ಬಿರುದು ಪಡೆದಿರುವ ದೇವಕೀ ತನಯರು ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ, ಮಂತ್ರಾಲಯ ರಾಘವೇಂದ್ರ ಮಠದ ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಪತ್ನಿ ಜಯಂತಿ ಬಳ್ಳಂಬೆಟ್ಟು ನಿವೃತ್ತ ಸರಕಾರಿ ನೌಕರರು; ಮಗ ಗುರುಪ್ರಸಾದ್ ಶೆಟ್ಟಿ ನ್ಯಾಯವಾದಿ. ಪರಿಣತಾ ಜಿ.ಶೆಟ್ಟಿ ಮತ್ತು ಪರಿಮಳ ಇಬ್ಬರು ಪುತ್ರಿಯರು. ಯಕ್ಷಗಾನ ಮತ್ತು ಹರಿಕಥಾ ಕ್ಷೇತ್ರದ 50 ವರ್ಷಗಳ ಸಾಧನೆಗಾಗಿ ಅವರಿಗೆ ಮಂಗಳೂರಿನಲ್ಲಿ ಸಾರ್ವಜನಿಕ ಸನ್ಮಾನ ಮತ್ತು ‘ಮಹಾಯಾನ’ ಅಭಿನಂದನ ಗ್ರಂಥ ಸಮರ್ಪಣೆಯಾಗಿದೆ.
ಇದೇ 2023 ನವೆಂಬರ್ 19 ರಿಂದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಜರಗುವ ‘ಶ್ರೀಹರಿ ಚರಿತ್ರೆ’ ಏಕಾದಶ ಸರಣಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳಲ್ಲಿ ಈ ಈರ್ವರು ಸಾಧಕರಿಗೆ ಪ್ರತ್ಯೇಕವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ. ಯಕ್ಷಾಂಗಣದ ಗೌರವಾಧ್ಯಕ್ಷ ಡಾ. ಎ.ಜೆ. ಶೆಟ್ಟಿ ಮತ್ತು ವಿವಿಧ ಕ್ಷೇತ್ರದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿರುವರು.

 

whatsapp image 2023 11 13 at 11.52.10 pm

whatsapp image 2023 11 13 at 11.52.10 pm (1)

Sponsors

Related Articles

Back to top button