ಯಕ್ಷಾಂಗಣದಿಂದ ದಿ.ಕೆ.ಎಸ್.ಉಪಾಧ್ಯಾಯ ಸಂಸ್ಮರಣೆ – ತಾಳಮದ್ದಳೆ…
ಯಕ್ಷಗಾನ ಹಿರಿಯರಿಂದ ಬಂದ ಬಳುವಳಿ: ರಾಘವೇಂದ್ರ ಶಾಸ್ತ್ರಿ...
ಮಂಗಳೂರು: ‘ಯಕ್ಷಗಾನ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಮಹೋನ್ನತ ಕಲೆ. ಅದಕ್ಕಾಗಿ ದುಡಿದವರು ಅನೇಕ. ದೇಶವಿದೇಶಗಳಲ್ಲಿ ಯಕ್ಷಗಾನ ಮತ್ತು ಗೊಂಬೆಯಾಟವನ್ನು ಮೆರೆಸಿದ ಕೋಡಿ ಶ್ರೀನಿವಾಸ ಉಪಾಧ್ಯಾಯರು ಅಂತಹ ಸಾಧಕರಲ್ಲೊಬ್ಬರು. ಅವರು ಗತಿಸಿ ಮೂರು ದಶಕ ಸಂದ ಬಳಿಕ ಇದೀಗ ಯಕ್ಷಾಂಗಣ ಸಂಸ್ಥೆ ಅವರನ್ನು ಸ್ಮರಿಸಿಕೊಳ್ಳುತ್ತಿರುವುದು ಶ್ರೇಷ್ಠ ಕಾರ್ಯ’ ಎಂದು ಶರವು ಶ್ರೀ ಶರಭೇಶ್ವರ ಮಹಾ ಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯದ ಡಾ. ದಯಾನಂದ ಪೈ ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರ ಸಹಯೋಗದಲ್ಲಿ ನವೆಂಬರ 19 ರಿಂದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಹನ್ನೊಂದನೇ ವರ್ಷದ ನುಡಿ ಹಬ್ಬ ಸಲುವಾಗಿ ಸೋಮವಾರ ಯಕ್ಷಗಾನದ ಸೀಮೋಲ್ಲಂಘನ ಸಾಧಕ ದಿ. ಕೆ.ಎಸ್. ಉಪಾಧ್ಯಾಯರ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೂತಕೋಲ – ಗೊಂಬೆಯಾಟ ಪ್ರವರ್ತಕ:
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸಂಸ್ಮರಣಾ ಭಾಷಣ ಮಾಡಿದ ಖ್ಯಾತ ಅರ್ಥಧಾರಿ, ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ‘ದಿವಂಗತ ಕೆ.ಎಸ್. ಉಪಾಧ್ಯಾಯರು ಮೊತ್ತ ಮೊದಲಿಗೆ ತುಳುನಾಡಿನ ಭೂತಕೋಲದ ಸ್ಥಬ್ದ ಚಿತ್ರವನ್ನು ಭಾರತದ ಗಣರಾಜ್ಯೋತ್ಸವ ಪೆರೇಡಿನಲ್ಲಿ ಪರಿಚಯಿಸಿದ ಸಾಹಸಿ. ಬಡಗುತಿಟ್ಟಿನ ಯಕ್ಷಗಾನ ಮತ್ತು ಉಪ್ಪಿನಕುದ್ರು ಗೊಂಬೆಯಾಟವನ್ನು ಫ್ರಾನ್ಸ್ ,ಹಾಲೆಂಡ್, ಜರ್ಮನಿಯೇ ಮೊದಲಾದ ದೇಶಗಳಲ್ಲಿ ಹಲವು ಬಾರಿ ಪ್ರದರ್ಶನ ಮಾಡಿದ ಸೀಮೋಲ್ಲಂಘನ ಸಾಧಕರು. ಮಂಗಳೂರಿನಲ್ಲಿ ಅವರು ಸ್ಥಾಪಿಸಿದ ಸಿದ್ದಾರ್ಥ ಮುದ್ರಣಾಲಯದ ಮೂಲಕ ಪತ್ರಿಕೋದ್ಯಮಿಯಾಗಿಯೂ ಪ್ರಸಿದ್ಧರು’ ಎಂದು ಸ್ಮರಿಸಿಕೊಂಡರು.
ಡಾ.ಲೀಲಾ ಎಸ್.ಉಪಾಧ್ಯಾಯರಿಗೆ ಗೌರವ:
ಸಮಾರಂಭದಲ್ಲಿ ದಿ. ಕೆ.ಎಸ್.ಉಪಾಧ್ಯಾಯರ ಧರ್ಮಪತ್ನಿ ಹಾಗೂ ಸಂತ ಆಗ್ನೆಸ್ ಮತ್ತು ಶಾರದಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ 87ರ ಹರೆಯದ ಲೀಲಾ ಎಸ್. ಉಪಾಧ್ಯಾಯರನ್ನು ಗೌರವಿಸಲಾಯಿತು. ಉಪನ್ಯಾಸಕಿ ವೀಣಾ ಎಸ್. ಯಡಪಡಿತ್ತಾಯ ಅಭಿನಂದನಾ ನುಡಿಗಳನ್ನಾಡಿದರು. ಸಮಿತಿಯ ಸುಮಾ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು.
ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷ ಮರ್ದಿನಿ ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರ ಲ| ತಾರಾನಾಥ ಶೆಟ್ಟಿ ಬೋಳಾರ, ಕಲಾಪೋಷಕ ಮಧುಕರ ರೈ ಕೊರೆಕ್ಕಾನ, ನ್ಯಾಯವಾದಿ ಸತೀಶ್ ಯಡಪಡಿತ್ತಾಯ ಹಾಗೂ ಮುಂಬೈಯ ಕಲಾವಿದೆ ಸುಮಂಗಲಾ ಎಸ್. ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷಾಂಗಣದ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಸ್ವಾಗತಿಸಿದರು. ಮಹಿಳಾ ವಿಭಾಗದ ನಿವೇದಿತಾ ಎನ್.ಶೆಟ್ಟಿ ವಂದಿಸಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಪ್ರಮುಖರಾದ ಕರುಣಾಕರ ಶೆಟ್ಟಿ ಪಣಿಯೂರು, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶ ಆಚಾರ್ಯ ಗೇರುಕಟ್ಟೆ, ವಾಸಪ್ಪ ಶೆಟ್ಟಿ ಬೆಳ್ಳಾರೆ, ಸಿದ್ದಾರ್ಥ ಅಜ್ರಿ ಉಪಸ್ಥಿತರಿದ್ದರು.
‘ರುಕ್ಮಾಂಗದ ಚರಿತ್ರೆ’ ತಾಳಮದ್ದಳೆ:
ಸಪ್ತಾಹದ ಅಂಗವಾಗಿ ಅಮೃತ ಅಡಿಗ ಅವರ ಭಾಗವತಿಕೆಯಲ್ಲಿ ‘ಶ್ರೀಹರಿ ಚರಿತ್ರೆ’ ಸರಣಿಯ ಎರಡನೆಯ ಆಖ್ಯಾನ ‘ರುಕ್ಮಾಂಗದ ಚರಿತ್ರೆ’ ಯಕ್ಷಗಾನ ತಾಳಮದ್ದಳೆ ಜರಗಿತು.