ಮಂಗಳೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಅನುದಾನ – ಸಂಸದ ನಳಿನ್ ಕುಮಾರ್ ಕಟೀಲ್ …
ಬಂಟ್ವಾಳ: ದ.ಕ. ಸಂಸದನಾದ ಮೇಲೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಳೆದ 10 ವರ್ಷಗಳಲ್ಲಿ ತನ್ನ ಪ್ರಯತ್ನದ ಫಲವಾಗಿ ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯ ಅಭಿವೃದ್ಧಿಕಾರ್ಯಗಳಿಗೆ ಸಾವಿರಾರು ಕೋಟಿ ರೂ.ಅನುದಾನಗಳನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಕೊಟ್ಟಿದೆ. ಕಣ್ಣು ಬಿಟ್ಟು ನೋಡಿದರೆ ಅದು ಗೊತ್ತಾಗುತ್ತದೆ ಎಂದು ತನ್ನ ಟೀಕಾಕಾರರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಸಾಧನೆಗಳ ಪಟ್ಟಿಯನ್ನೇ ಮುಂದಿಡುವ ಮೂಲಕ ತಿರುಗೇಟು ನೀಡಿದ್ದಾರೆ.
ಸೋಮವಾರ ಬಿ.ಸಿ.ರೋಡಿನಲ್ಲಿರುವ ಬಂಟವಾಳ ರೈಲ್ವೇ ನಿಲ್ದಾಣವನ್ನು ಎಬಿಎಸ್ಎಸ್’ ಯೋಜನೆಯಡಿ 28.49 ಕೋಟಿ ರೂಪಾಯಿ ವೆಚ್ಚದಲ್ಲಿ ಬಂಟವಾಳ ಪುನರಾಭಿವೃದ್ಧಿಗೊಳ್ಳಲಿದ್ದು ಪ್ರಧಾನಿ ನರೇಂದ್ರಮೋದಿಯವರು ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಬಂಟವಾಳ ರೈಲ್ವೇ ನಿಲ್ದಾಣದಲ್ಲಿನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದನಳಿನ್ ಕುಮಾರ್ ಕೇಂದ್ರ ಸರಕಾರ ಅನುದಾನ ಮಂಜೂರು ಮಾಡಬೇಕೆಂದಾದರೆ ಲೋಕಸಭಾ ಸದಸ್ಯರ ಪ್ರಯತ್ನ ಬೇಕು ಎಂಬುದು ಗೊತ್ತಿರಬೇಕು, ಚಾರ್ಮಾಡಿ ಘಾಟಿ ರಸ್ತೆ 350 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಮಾಣಿ ಮೈಸೂರು ರಸ್ತೆ ಅಭಿವೃದ್ಧಿ ಆಗಿದ್ದು, ಇನ್ನು ಚತುಷ್ಪಥವಾಗಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಯಾಗಿದೆ. ದೇಶದ ಏಕೈಕ ಪ್ಲಾಸ್ಟಿಕ್ ಪಾರ್ಕ್ ಮಂಗಳೂರಿನಲ್ಲಿದೆ. ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿದ್ದು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ವೇಗವನ್ನು ಪಡೆದಿದೆ ಎಂದರು.
ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ. ಗಳಲ್ಲಿ ಅಭಿವೃದ್ಧಿಯಾಗಿದೆ. ತಾನು ಸಂಸದನಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ವೇಗದಿಂದ ಆಗಿವೆ. ಕಳೆದ 10 ವರ್ಷಗಳಲ್ಲಿ 2650 ಕೋಟಿ ರೂ.ಗಳನ್ನು ನರೇಂದ್ರ ಮೋದಿ ಸರಕಾರ ಕೊಟ್ಟಿದೆ. ಇದು ತನ್ನ ಪ್ರಯತ್ನದಿಂದ ಆಗಿದೆ. ಪಾಲ್ಗಾಟ್ ನಿಂದ ಮಂಗಳೂರು ವರೆಗಿನ ಎಲೆಕ್ಟ್ರಫಿಕೇಶನ್ ಮುಗಿದಿದೆ. ಪುತ್ತೂರು ರೈಲ್ವೆ ನಿಲ್ದಾಣ ಆದರ್ಶ ಯೋಜನೆಯಡಿ ಅಭಿವೃದ್ಧಿಗೊಂಡರೆ, ಬಂಟ್ವಾಳ ಮತ್ತು ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣ ಸಂಪೂರ್ಣ ಬದಲಾಗಲಿದೆ. ನೇರಳಕಟ್ಟೆ ರೈಲ್ವೆ ನಿಲ್ದಾಣದ ಅಭಿವೃದ್ಧಿಗೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಅಳಪೆ ಪಡೀಲ್, ಜಪ್ಪು ಕುಡುಪಾಡಿ, ಮಹಾಕಾಳಿಪಡ್ಡು, ಪುತ್ತೂರು ಎಪಿಎಂಸಿ, ವಿವೇಕಾನಂದ ಕಾಲೇಜು ಬಳಿ ಮೇಲ್ಸ್ ತುವೆ ನಿರ್ಮಾಣ ಕಾರ್ಯಗಳಲ್ಲಿ ಹೆಚ್ಚಿನವು ಆಗಿದ್ದು, ಒಂದೆರಡು ಅಂತಿಮ ಹಂತದಲ್ಲಿದೆ. ವಂದೇ ಭಾರತ್ ರೈಲು ಮಂಗಳೂರಿಗೆ ಬಂದಿದೆ. ತಿರುವನಂತಪುರ ಕಾಸರಗೋಡು ರೈಲು ಈಗ ಮಂಗಳೂರಿಗೆ ವಿಸ್ತರಣೆಗೊಂಡಿದ್ದರೆ, ಗೋವಾ ಮಂಗಳೂರು ಸಂಪರ್ಕ ವಂದೇ ಭಾರತ್ ಆರಂಭವಾಗಿ ಜನಪ್ರಿಯತೆ ಗಳಿಸಿದೆ. ಬೇಡಿಕೆ ಇರುವ ಎಲ್ಲ ಕೆಲಸಗಳೂ ನಡೆಯುತ್ತಿವೆ. ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಬೇಕಾದ ಕಾರ್ಯಗಳಲ್ಲಿ ಯಡಿಯೂರಪ್ಪ ಸರಕಾರವಿದ್ದಾಗ ನೀಡಿದ ಅನುದಾನದ ಕಾರ್ಯಗಳು ಪೂರ್ಣಗೊಳ್ಳುತ್ತಿವೆ. ಈ ಬಾರಿ 7,524 ಕೋಟಿ ರೂಪಾಯಿ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಒದಗಿಸಲಾಗಿದೆ, ತನ್ನ ಕ್ಷೇತ್ರದಲ್ಲಿ 2650 ಕೋಟಿ ರೂಪಾಯಿಯ ಕೆಲಸ ರೈಲ್ವೆಗೆ ಸಂಬಂಧಿಸಿ ಆಗಿದೆ ಪರಿವರ್ತಿತ ಭಾರತ, ವಿಕಸಿತ ಭಾರತ ಇಂದು ನಿರ್ಮಾಣವಾಗಿದ್ದು, ರೈಲ್ವೆ ಕಾಮಗಾರಿ ಕುದುರೆ ವೇಗ ಪಡೆದಿದೆ ಎಂದು ನಳಿನ್ ಹೇಳಿದರು.
ಬಂಟ್ವಾಳ ರೈಲ್ವೆ ನಿಲ್ದಾಣ ವಿಶ್ವದರ್ಜೆಗೆ ಶಾಸಕ ನಾಯ್ಕ್ ಸಂತಸ:
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಮಾತನಾಡಿ, ತನ್ನ ಕ್ಷೇತ್ರವಾದ ಬಂಟ್ವಾಳದಲ್ಲಿ ರೈಲ್ವೆ ನಿಲ್ದಾಣ ವಿಶ್ವದರ್ಜೆಗೇರುತ್ತಿರುವುದು ಸಂತಸದ ವಿಷಯ. ಮಕ್ಕಳು ಭಾರತದ ಭವಿಷ್ಯ. ಹೀಗಾಗಿ ಈ ಕಾರ್ಯಕ್ರಮದ ಮೂಲಕ ರೈಲ್ವೆಗೆ ಸಂಬಂಧಿಸಿದ ಅರಿವು ಮಕ್ಕಳಿಗೂ ಆಗುತ್ತಿದೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ಭಾಗಕ್ಕೆ ಕೋಟ್ಯಾಂತರ ರೂ. ಅನುದಾನ ತಂದಿದ್ದಾರೆ ಎಂದು ಹೇಳಿದರು.
ರೈಲ್ವೆಯಲ್ಲಾಗುತ್ತಿರುವ ಬದಲಾವಣೆ ಹಾಗೂ ಭಾರತೀಯ ರೈಲ್ವೆ ಕುರಿತ ಮಾಹಿತಿಯನ್ನು ಭವಿಷ್ಯದ ಜನಾಂಗ ಪಡೆಯಬೇಕಾದ ಅಗತ್ಯವಿದೆ. ಈ ಕಾರಣಕ್ಕಾಗಿ ಮಕ್ಕಳಿಗೆ ಪ್ರಬಂಧ ಸಹಿತ ವಿವಿಧ ಸ್ಪರ್ಧೆಗಳನ್ನು ಅಅಯೋಜಿಸಲಾಗಿದ್ದು, ರಾಷ್ಟ್ರದಾದ್ಯಂತ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ ಶ್ಲಾಘಿಸಿದರು.
ಈ ಸಂದರ್ಭ ರೈಲ್ವೆ ಡಿವಿಜನಲ್ ಇಂಜಿನಿಯರ್ ಸಾವನ್ ಕುಮಾರ್, ಅಸಿಸ್ಟೆಂಟ್ ಕಮರ್ಶಿಯಲ್ ಮ್ಯಾನೇಜರ್ ಉಮೇಶ್ ನಾಯಕ್ ಉಪಸ್ಥಿತರಿದ್ದರು. ಮೈಸೂರಿನ ಮೆಕ್ಯಾನಿಕಲ್ ವಿಭಾಗದ ಕವಿತಾ ಮತ್ತು ಚೀಫ್ ಟಿಕೆಟ್ ಇನ್ಸ್ ಪೆಕ್ಟರ್ ವಿಠಲ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲೆ, ಕಾಲೇಜು ಮಕ್ಕಳಿಗೆ ನಡೆಸಿದ ಪ್ರಬಂಧ, ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರೈಲ್ವೆ ಇಲಾಖೆಯ ಕುರಿತ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಜಿ.ಪಂ.ಮಾಜಿ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್,ತುಂಗಪ್ಪ ಬಂಗೇರ,ಕಮಾಲಾಕ್ಷಿ ಪೂಜಾರ್ತಿ,ಸುಲೋಚನಾ ಜಿ.ಕೆ.ಭಟ್
ಪ್ರಮುಖರಾದ ಹರಿಕೃಷ್ಣ ಬಂಟ್ವಾಳ,ಬಿ.ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ, ದೇವಪ್ಪ ಪೂಜಾರಿ, ಮಾಧವ ಮಾವೆ,ಡೊಂಬಯ್ಯ ಅರಳ,ರೋನಾಲ್ಡ್ ಡಿಸೋಜಾ ,ಪುರುಷೋತ್ತಮ ಶೆಟ್ಟಿ ವಾಮದಪದವು, ಸುದರ್ಶನ್ ಬಜ, ಮೊದಲಾದವರು ಉಪಸ್ಥಿತರಿದ್ದರು.