ಜುಲೈ 6 – ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ…

ಮಡಿಕೇರಿ: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭ ಜುಲೈ 6ರಂದು ಬೆಳಿಗ್ಗೆ 10.30ಕ್ಕೆ ಸುಳ್ಯದ ಕೇರ್ಪಳದಲ್ಲಿರುವ ಬಂಟರ ಭವನದಲ್ಲಿ ನಡೆಯಲಿದೆ ಎಂದು ಟಿ.ಎಂ.ಶಹೀದ್ ತೆಕ್ಕಿಲ್ ಅಭಿನಂದನಾ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ   ಮಂಗಳವಾರ ಮಡಿಕೇರಿಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಆರೋಗ್ಯ ಖಾತೆ ಸಚಿವ ದಿನೇಶ್‌ ಗುಂಡೂರಾವ್ ಅಭಿನಂದನಾ ಸಂಚಿಕೆ ಬಿಡುಗಡೆ ಮಾಡುವರು. ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮ್ಮದ್ 55 ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದು, ಶಾಸಕರಾದ ಭಾಗೀರಥಿ ಮುರುಳ್ಯ 55 ಸೇವಾ ಚಟುವಟಿಕೆಯ ಸವಲತ್ತು ವಿತರಿಸಲಿದ್ದಾರೆ ಹಾಗೂ ನಾನು ಅಧ್ಯಕ್ಷತೆ ವಹಿಸಲಿದ್ದೇನೆ ಎಂದು ಅವರು ಹೇಳಿದರು.
ಟಿ.ಎಂ.ಶಹೀದ್ ತೆಕ್ಕಿಲ್ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸನ್ಮಾನಿಸಲಿದ್ದಾರೆ. ಲಯನ್ಸ್ ಸಂಸ್ಥೆಯ ಎಂಜೆಎಫ್ ಎಂ.ಬಿ.ಸದಾಶಿವ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ, ಮಾಜಿ ಸಚಿವ ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಟಿ.ಎಂ.ಶಹೀದ್ ತೆಕ್ಕಿಲ್ ಅವರು 2001ರಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನವನ್ನು ಸ್ಥಾಪಿಸಿ, ಹಲವು ಜನಪರ ಕೆಲಸಗಳನ್ನು ಮಾಡಿದ್ದಾರೆ. 2018ರಲ್ಲಿ ಜೋಡುಪಾಲ ನೆರೆ ಸಂತ್ರಸ್ಥರಿಗೆ ತಮ್ಮ ಮನೆಯಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಅವರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಿದ್ದರು. ಈ ಸಂತ್ರಸ್ಥರನ್ನು ಮೊದಲು ರಕ್ಷಿಸಿದ 18 ಮಂದಿ ಯುವಕರಿಗೆ ಸಂಸ್ಥೆ ವತಿಯಿಂದ ತೆಕ್ಕಿಲ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಿದ್ದರು ಎಂದು ಅವರು ಹೇಳಿದರು.
ಭಾರತೀಯ ಸಂಸ್ಕೃತಿ, ಭ್ರಾತೃತ್ವ, ಶಿಸ್ತು, ಸ್ವಚ್ಛತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಮೌಲ್ಯಾಧಾರಿತ ಶಿಕ್ಷಣ ನೀಡುವ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯನ್ನು ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಇವರು ಸ್ಥಾಪಿಸಿದ್ದಾರೆ. ಇಷ್ಟು ಮಾತ್ರವಲ್ಲ ಇನ್ನೂ ಅನೇಕ ಜನಪರ ಕೆಲಸಗಳನ್ನು ಇವರು ಮಾಡುತ್ತಿರುವುದರಿಂದ ಸಾರ್ವಜನಿಕರು ಇವರನ್ನು ಸನ್ಮಾನಿಸಲು ನಿರ್ಧರಿಸಿದ್ದಾರೆ ಎಂದರು.
ಟಿ.ಎಂ.ಶಹೀದ್ ತೆಕ್ಕಿಲ್ ಅಭಿನಂದನಾ ಸಮಿತಿಯ ಆಹಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸಮಿತಿ ಉಪಾಧ್ಯಕ್ಷರಾದ ಇಕ್ಬಾಲ್ ಎಲಿಮಲೆ, ಪರಶುರಾಮ ಚಿಲ್ತಡ್ಕ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಅಬ್ಬಾಸ್, ಗ್ಯಾರಂಟಿ ಅನುಷ್ಠಾನ ಸಮಿತಿಯ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ರಂಜಿತ್ ರೈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

whatsapp image 2024 07 02 at 8.35.46 pm

Sponsors

Related Articles

Back to top button