ವೇ.ಮೂ.ಜನಾರ್ದನ ಭಟ್ ಮೊಗರ್ನಾಡು ಇವರಿಗೆ ಕರ್ನಾಟಕ ಚುಟುಕು ರತ್ನ ಪ್ರಶಸ್ತಿ ಗೌರವ…

ಬಂಟ್ವಾಳ: ದ.ಕ. ಜಿಲ್ಲೆಯ ಹಿರಿಯ ಚುಟುಕು ಕವಿ ಮೊಗರ್ನಾಡು ವೇದಮೂರ್ತಿ ಜನಾರ್ದನ ವಾಸುದೇವ ಭಟ್ ಇವರಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹುಬ್ಬಳ್ಳಿ ಕೇಂದ್ರ ಸಮಿತಿ ವತಿಯಿಂದ ಕರ್ನಾಟಕ ಚುಟುಕು ರತ್ನ ಗೌರವ ಪ್ರಶಸ್ತಿಯನ್ನು ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಕಟಿಸಿದ್ದಾರೆ.
ಕಾಶಿ ಮಠಾಧೀಶರ ಸ್ವಾಮ್ಯಕ್ಕೆ ಒಳಪಟ್ಟ ಮಂಗಳೂರಿನ ಶ್ರೀನಿವಾಸ ನಿಗಮಾಗಮ ಪಾಠಶಾಲೆಯಲ್ಲಿ ವೇದಾಧ್ಯಯನ, ಆಗಮ ಪಾಠ, ಜ್ಯೋತಿಷ್ಯ ಶಿಕ್ಷಣದ ಬಳಿಕ ಶಿಕ್ಷಣ ಪಡೆದ ಶಿಕ್ಷಣ ಸಂಸ್ಥೆಯಲ್ಲಿಯೇ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.
ಚುಟುಕು ಕವಿಯಾಗಿ ಸಾವಿರಾರು ಚುಟುಕು ರಚನೆ ಮಾಡಿದ್ದು ಕಂಠಪಾಠವಾಗಿ ಹೇಳುವ ಮೂಲಕ ಕುಶಾಗ್ರಮತಿ ಚುಟುಕು ಸಾಹಿತಿಯಾಗಿ ಗುರುತಿಸಲ್ಪಟ್ಟಿದ್ದಾರೆ. ದೆಹಲಿ ಕರ್ನಾಟಕ ಸಂಘದಿಂದ ಏರ್ಪಡಿಸಲಾದ ದೆಹಲಿಯಲ್ಲಿ ರಾಷ್ಟ್ರಮಟ್ಟದ ಚುಟುಕು ಸಮ್ಮೇಳನದ ಅಧ್ಯಕ್ಷ ರಾಗಿದ್ದರು. ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪೇಜಾವರ ಮಠದ ಉಭಯ ಶ್ರೀಗಳಿಂದ ಸೌರಭ ರತ್ನ ಪ್ರಶಸ್ತಿ ಪುರಸ್ಕಾರ ನೀಡಿಗೌರವಿಸಲಾಗಿತ್ತು.
ಪಾಣೆಮಂಗಳೂರು ಶಾರದಾ ಪ್ರೌಢ ಶಾಲೆಯ ಸ್ಥಾಪನಾ ವರ್ಷದ ವಿದ್ಯಾರ್ಥಿಯಾಗಿದ್ದು 2015 ರಿಂದ ಶಾಲಾಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 22 ವರ್ಷಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಲಕ್ಷ್ಮೀನರಸಿಂಹ ದೇವಸ್ಥಾನ ಮೊಗರ್ನಾಡಿನ ಪ್ರಧಾನ ಜವಾಬ್ದಾರಿ ನಿರ್ವಹಿಸುತ್ತಾ ದೇವಳದ ಜೀರ್ಣೋದ್ಧಾರ ಕಾರ್ಯ ಮಾಡಿದ್ದು ಹಲವಾರು ಸಂಘ ಸಂಸ್ಥೆಗಳು ಗೌರವ ಸನ್ಮಾನ ಮಾಡಿವೆ.