ದಾಸೋಹಿ ಪ್ರಶಸ್ತಿಗೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಆಯ್ಕೆ…
ಬಂಟ್ವಾಳ: ಸಾಹಿತ್ಯ,ಲಲಿತಕಲಾ, ಸಾಮಾಜಿಕ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ ಗಣ್ಯರಿಗೆ ಕಚುಸಾಪ ಪ್ರತಿವರ್ಷ ನೀಡುವ ಪ್ರತಿಷ್ಠಿತ ” ದಾಸೋಹಿ ” ಪ್ರಶಸ್ತಿಗೆ ಕ.ಸಾ.ಪ. ಮಾಜಿ ಅಧ್ಯಕ್ಷ , ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೈ ದಾನಿ ಎಂದೇ ಖ್ಯಾತರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಚುಸಾಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಕಟಿಸಿದ್ದಾರೆ.
ಸಾಹಿತ್ಯ ಸಂಘಟನೆ,ಸಮಾಜ ಸೇವೆ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳಿಗೆ ಅಪಾರ ಕೊಡುಗೆ ನೀಡಿದವರು ಪುನರೂರು. ಸಾಹಿತ್ಯ ಸಮ್ಮೇಳನಗಳಿಗೆ ಸಾಹಿತ್ಯ ಜಾತ್ರೆಯ ಸ್ವರೂಪ ನೀಡಿದವರು. ಅತಿ ಹೆಚ್ಚು ದತ್ತಿ ನಿಧಿಗಳನ್ನು ಸಾಹಿತ್ಯ ಪರಿಷತ್ತಿಗೆ ನೀಡಿದ್ದರು. ಸಾಹಿತ್ಯ ಪರಿಷತ್ತಿನಿಂದ ಯಾವುದೇ ಸಂಭಾವನೆ ಪಡೆಯದೆ ಪರಿಷತ್ತಿನ ಕಾರ್ಯ ಮಾಡಿದ್ದರು. ಲಯನ್ಸ್ ಸಂಸ್ಥೆಯ ಮೂಲಕ ಹಲವು ಸೇವಾ ಕಾರ್ಯಗಳನ್ನು ನಡೆಸಿದ್ದರು. ಬಡವರಿಗೆ ನೂರಕ್ಕೂ ಹೆಚ್ಚು ಮನೆಗಳನ್ನು ಉಚಿತವಾಗಿ ನಿರ್ಮಿಸಿಕೊಟ್ಟು ಗೃಹ ದಾನ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಸೆಪ್ಟೆಂಬರ್ 5 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಸಂಪನ್ನಗೊಳ್ಳಲಿರುವ ಕಚುಸಾಪ ರಾಜ್ಯ ಶಿಕ್ಷಕ ಸಾಹಿತಿಗಳ ಏಳನೆಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.