ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಮಾನಸಿಕ ತುಮುಲಗಳು ಮತ್ತು ಪರಿಹಾರ ಬಗ್ಗೆ ಜಾಗೃತಿ ಕಾರ್ಯಕ್ರಮ…

ಪುತ್ತೂರು: ಮಕ್ಕಳು ಕಿಶೋರಾವಸ್ಥೆಯಿಂದ ತಾರುಣ್ಯಾವಸ್ಥೆಗೆ ಬರುವ ಸಂದರ್ಭದಲ್ಲಿ ಆಗುವ ದೈಹಿಕ ಬದಲಾವಣೆ ಮತ್ತು ಮಾನಸಿಕ ಬದಲಾವಣೆಗಳನ್ನು ಸರಿಯಾಗಿ ತಿಳಿಹೇಳದಿದ್ದರೆ ಅವರು ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಪುತ್ತೂರಿನ ಪ್ರಜ್ಞಾ ಮಾನಸಿಕ ಆರೋಗ್ಯ ಕೇಂದ್ರದ ತಜ್ಞ ಡಾ.ಗಣೇಶ್‍ಪ್ರಸಾದ್ ಮುದ್ರಜೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಡಾಟಾ ಸೈನ್ಸ್ ವಿಭಾಗ, ಕಾಲೇಜು ಆಂತರಿಕ ದೂರು ಸಮಿತಿ ಮತ್ತು ಪೇರೆಂಟ್ ರಿಲೇಶನ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀರಾಮ ಸಬಾಭವನದಲ್ಲಿ ಸೆ. 19 ರಂದು ನಡೆದ ತಾರುಣ್ಯಾವಸ್ಥೆಯಲ್ಲಿ ಎದುರಿಸುವ ಮಾನಸಿಕ ತುಮುಲಗಳು ಮತ್ತು ಪರಿಹಾರ ಎನ್ನುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವಯಸ್ಸಿನಲ್ಲಿ ಉಂಟಾಗುವ ಶಾರೀರಿಕ ಬದಲಾವಣೆ ಇದರಿಂದಾಗುವ ಮನೋಕಾಮನೆಗಳು ಇದನ್ನು ಪರಿಹರಿಸುವ ರೀತಿ ಇವುಗಳ ಬಗ್ಗೆ ಹೆಚ್ಚು ಯೋಚಿಸುವುದರ ಜತೆಯಲ್ಲಿ ಸಾಮಾಜಿಕ ಜವಾಬ್ಧಾರಿಗಳಿಂದ ಉಂಟಾಗುವ ತುಮುಲಗಳು ಅವರನ್ನು ಒತ್ತಡಕ್ಕೆ ಸಿಲುಕಿಸುತ್ತದೆ. ಇದನ್ನು ನಿವಾರಿಸುವುದಕ್ಕೆ ಇದರ ಬಗ್ಗೆ ಸೂಕ್ತ ತಿಳುವಳಿಕೆಯನ್ನು ಪಡೆದುಕೊಳ್ಳುವುದು, ಸರಿಯಾದ ನಿದ್ರೆ, ಉತ್ತಮ ಆಹಾರಾಭ್ಯಾಸಗಳು, ಲಘು ವ್ಯಾಯಾಮ ತುಂಬಾ ಸಹಕಾರಿಯಾಗುತ್ತದೆ ಎಂದರು. ಮನಸ್ಸು ಯಾವತ್ತೂ ನಕಾರಾತ್ಮಕ ಭಾವನೆಗಳನ್ನು ಹೊಂದಲು ಆಸ್ಪದ ನೀಡಬಾರದು ಅಂತಹ ಸಂದರ್ಭದಲ್ಲಿ ತಜ್ಞರೊಂದಿಗೆ ಆಪ್ತ ಸಮಾಲೋಚನೆಯನ್ನು ನಡೆಸಬೇಕು ಅಲ್ಲದೆ ಮುಂದೆ ಚಟವಾಗಿ ಪರಿಣಮಿಸುವ ಯಾವುದೇ ಕೆಟ್ಟ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಅವರು ನುಡಿದರು.
ಕಾಲೇಜು ಆಂತರಿಕ ದೂರು ಸಮಿತಿ ಸಂಯೋಜಕಿ ಮತ್ತು ಡಾಟಾ ಸೈನ್ಸ್ ವಿಭಾಗ ಮುಖ್ಯಸ್ಥೆ ಪ್ರೊ.ರೂಪಾ.ಜಿಕೆ ಹಾಗೂ ಶಿಕ್ಷಕ-ರಕ್ಷಕ ಸಂಘದ ಸಂಯೋಜಕಿ ಪ್ರೊ. ಸಪ್ನಾ.ಕೆ.ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೊ.ರೂಪಾ.ಜಿಕೆ ಸ್ವಾಗತಿಸಿ, ಪ್ರೊ. ಸಪ್ನಾ.ಕೆ.ಎನ್ ವಂದಿಸಿದರು. ಶ್ರುತಾ ಕಾರ್ಯಕ್ರಮ ನಿರ್ವಹಿಸಿದರು.