ಕಬಕ ಪೇಟೆಯಲ್ಲಿ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ…..

ಪುತ್ತೂರು: ಕಬಕ ಗ್ರಾಪಂ ವ್ಯಾಪ್ತಿಯ ಕಬಕ-ವಿಟ್ಲ ರಸ್ತೆಯ ಕಬಕ ಪೇಟೆಯಲ್ಲಿ ಅನಧಿಕೃತ ಅಂಗಡಿಗಳನ್ನು ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಗುರುವಾರ ಮುಂಜಾನೆ ತೆರವುಗೊಳಿಸಲಾಯಿತು. ಸುಮಾರು 9 ಅಂಗಡಿಗಳನ್ನು ಪುತ್ತೂರು ತಹಸೀಲ್ದಾರ್, ತಾಲೂಕು ಪಂಚಾಯತ್ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.
ಕಬಕ ಪೇಟೆಯಲ್ಲಿ ಕಳೆದ 40 ವರ್ಷಗಳಿಂದ ಅನಧಿಕೃತ ಗೂಡಂಗಡಿಗಳು ಸಹಿತ ಇನ್ನಿತರ ಅಂಗಡಿಗಳು ಕಾರ್ಯಾಚರಿಸುತ್ತಿದ್ದವು. ಪರಿಣಾಮ ಅಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಅಂಗಡಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಕಳೆದ ಹಲವಾರು ವರ್ಷಗಳಿಂದ ಕಬಕ ಗ್ರಾಪಂನ ಸಾಮಾನ್ಯ, ಗ್ರಾಮ ಸಭೆಗಳಲ್ಲಿ ಚರ್ಚೆಗೆ ಕಾರಣವಾಗುತ್ತಾ ಬಂದಿತ್ತು. ಅಂಗಡಿಗಳನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಗ್ರಾಪಂ ವತಿಯಿಂದ ತೆರವುಗೊಳಿಸುವಂತೆ ನೋಟೀಸು ಕೂಡಾ ನೀಡಲಾಗಿತ್ತು. ಈ ನಡುವೆ ತೆರವುಗೊಳಿಸದೇ ಇರುವ ಕಾರಣ ಪ್ರಕರಣ ಹೈಕೋರ್ಟ್ ತನಕ ತಲುಪಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಕಳೆದ ಜುಲೈ 9 ರಂದು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು. ಆ ಬಳಿಕವೂ ಪಂಚಾಯತ್‍ನಿಂದ ಸಂಬಂಧಿಸಿದ ಅಂಗಡಿದಾರರಿಗೆ ನೋಟೀಸು ನೀಡಲಾಗಿತ್ತು.
ಆ ಬಳಿಕ ಅಂಗಡಿ ಮಾಲಕರು ತೆರವಿಗೆ ಸಂಬಂಧಿಸಿದ ತಡೆಯಾಜ್ಞೆಗಾಗಿ ಕೋರ್ಟ್‍ನ ಮೊರೆ ಹೋಗಿದ್ದರು. ಇದೀಗ ಪುತ್ತೂರು ತಹಶೀಲ್ದಾರರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನೊಂದಿಗೆ ಗುರುವಾರ ಮುಂಜಾನೆ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.
ಈ ನಡುವೆ ಅಧಿಕೃತವಾಗಿ ವ್ಯಾಪಾರ ನಡೆಸುವ ಎರಡು ಅಂಗಡಿ ಮಾಲಕರು ತಮ್ಮ ವ್ಯಾಪಾರಕ್ಕಾಗಿ ಸರಕಾರಿ ಜಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ವಿಸ್ತರಣೆ ಮಾಡಿದ್ದರು. ಗುರುವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಯುತ್ತಿದ್ದಂತೆ ತಾವೇ ಸ್ವತಃ ಅಕ್ರಮಿತ ವಿಸ್ತರಣೆ ಜಾಗವನ್ನು ತೆರವುಗೊಳಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button