ಷೇರು ಮಾರುಕಟ್ಟೆ ಹೂಡಿಕೆ ಕಾರ್ಯಾಗಾರ….
ಪುತ್ತೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಸುಲಭದ ಮಾತಲ್ಲ. ಇಲ್ಲಿ ತಾಳ್ಮೆ ತುಂಬಾ ಮುಖ್ಯವಾಗಿರುತ್ತದೆ. ಹೂಡಿಕೆ ಮಾಡುವ ಮೊದಲು ಕಂಪೆನಿಗಳ ಆಡಳಿತ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿಕೊಳ್ಳಬೇಕು, ಇಲ್ಲವಾದಲ್ಲಿ ಅನಷ್ಟಗಳಾಗುವ ಸಂಭವಗಳು ಹೆಚ್ಚಿರುತ್ತವೆ ಎಂದು ಬಿ.ಎಸ್.ಇ. ಎಂಪಾನೇಲ್ಡ್‍ನ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ಭಟ್ ಕೆ. ಹೇಳಿದರು.
ಅವರು ಬುಧವಾರ ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಸಂಶೋಧನ ಮತ್ತು ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಹೂಡಿಕೆದಾರರ ರಕ್ಷಣಾ ನಿಧಿ ಸಹಯೋಗದಲ್ಲಿ ನಡೆದ ಮ್ಯೂಚುವಲ್ ಫಂಡ್ ಮತ್ತು ಹಣಕಾಸು ಯೋಜನೆಯ ಬಂಡವಾಳ ಮಾರುಕಟ್ಟೆ ಜಾಗೃತಿ ಪರಿಚಯದ ಶಿಕ್ಷಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹೆಚ್ಚಿನ ಲಾಭಕ್ಕಾಗಿ ಜನರು ತಿಳಿಯದೆ ಎಲ್ಲೆಂದರಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಯೋಜನೆ ಅಥವಾ ಮುಂದಾಲೋಚನೆ ಇಲ್ಲದೆ ಹೂಡಿಕೆ ಮಾಡಿದರೆ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಹೂಡಿಕೆ ಮಾಡುವ ಕಂಪೆನಿಗಳ ಕೆಲಸ, ಲಾಭಾಂಶಗಳನ್ನು ತಿಳಿದುಕೊಂಡು ಹೂಡಿಕೆ ಮಾಡುವುದು ಉತ್ತಮ ಎಂದು ಹೇಳಿದರು.
ವಿದೇಶದಲ್ಲಿ ಶೇಕಡಾ 40 ರಷ್ಟು ಜನ ಹೂಡಿಕೆ ಮಾಡುವವರಿದ್ದಾರೆ, ಭಾರತದಲ್ಲಿ ಕೇವಲ 3 ರಿಂದ 4 ಶೇಕಡದಷ್ಟು ಜನ ಮಾತ್ರ ಹೂಡಿಕೆ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಜನರಿಗೆ ಷೇರು ಮಾರುಕಟ್ಟೆಯ ಬಗ್ಗೆ ತಿಳುವಳಿಕೆ ಇಲ್ಲದೆ ಹೂಡಿಕೆ ಮಾಡಿ ಹಣ ಕಳೆದುಕೊಳ್ಳುತ್ತಾರೆ. ಹೀಗಾಗಿ ತಿಳಿದ ವ್ಯಕ್ತಿಗಳಲ್ಲಿ ಸಲಹೆಗಳನ್ನು ಪಡೆದುಕೊಂಡು ಹೂಡಿಕೆ ಮಾಡುವುದು ಉತ್ತಮ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಂಕರನಾರಾಯಣ ಭಟ್ ಮಾತನಾಡಿ, ಹೂಡಿಕೆಯ ಯೋಜನೆಗಳು ಇಂದಿನ ಜೀವನ ಶೈಲಿಯಲ್ಲಿ ಮುಖ್ಯವಾಗಿರುತ್ತದೆ. ಹೂಡಿಕೆ ಎನ್ನುವುದು ಈಗಿನಿಂದ ಪ್ರಾರಂಭವಾದದಲ್ಲ, ಕ್ರಿಸ್ತಪೂರ್ವದಲ್ಲಿಯೇ ವಿಷ್ಣುಗುಪ್ತ ಬರೆದ ಚಾಣಕ್ಯ ನೀತಿ ಎಂಬ ಪುಸ್ತಕದಲ್ಲಿ ಈ ಹೂಡಿಕೆಯ ಬಗ್ಗೆ ವಿಶ್ಲೇಷಿಸಲಾಗಿತ್ತು. ಹೂಡಿಕೆಯ ಸಮಯದಲ್ಲಿ ಬೆಲೆ, ಯೋಜನೆ ನೋಡಿಕೊಳ್ಳುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭ ವಾಣಿಜ್ಯ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಸ್ನಾತಕೋತ್ತರ ವಿಭಾಗಗಳ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತ ಸ್ವಾಗತಿಸಿದರು. ರಮಿತ ವಂದಿಸಿದರು. ದೀಕ್ಷಾ ಎಂ. ಕಾರ್ಯಕ್ರಮ ನಿರ್ವಹಿಸಿದರು.