ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಸ್ವಯಂಪ್ರೇರಿತ ರಕ್ತದಾನ ಶಿಬಿರ…

ಪುತ್ತೂರು: ವಿವಿಧ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ರಕ್ತದ ಅಗತ್ಯವಿರುತ್ತದೆ. ಅಪಘಾತ, ಶಸ್ತ್ರಚಿಕಿತ್ಸೆ, ರಕ್ತಹೀನತೆ, ಲುಕೇಮಿಯಾ ಮುಂತಾದ ಸಂದರ್ಭದಲ್ಲಿ ರಕ್ತ ಅತೀ ಅವಶ್ಯವಾಗಿರುತ್ತದೆ. ಕೆಲವರಂತೂ ರಕ್ತ ಸಿಗದೇ ಪ್ರಾಣವನ್ನು ಕಳೆದುಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಈ ಕಾರಣದಿಂದ ರಕ್ತದಾನದ ಮಹತ್ವವನ್ನು ಅರಿತು ಅರ್ಹರೆಲ್ಲರೂ ರಕ್ತದಾನ ಮಾಡುವುದಕ್ಕೆ ಹಿಂಜರಿಯಬಾರದು ಎಂದು ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೃಂದ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಯೂತ್ ರೆಡ್‍ಕ್ರಾಸ್ ಮತ್ತು ಎನ್‍ಎಸ್‍ಎಸ್ ಘಟಕ ಹಾಗೂ ಕೆಎಂಸಿ ರಕ್ತಕೇಂದ್ರ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ಅ.16 ರಂದು ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಮುಖ್ಯ ಅತಿಥಿಗಳಾಗಿ ಮಾತಾಡಿದರು.
ರಕ್ತ ನೀಡುವುದಕ್ಕೆ ಇರುವ ಮಾನದಂಡಗಳು ಮತ್ತು ರಕ್ತದಾನದ ನಂತರ ರೋಗಿಗೆ ಅದನ್ನು ನೀಡುವ ಮೊದಲು ಯಾವೆಲ್ಲಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎನ್ನುವುದನ್ನು ಅವರು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ರಕ್ತದಾನವು ಅನೇಕ ಜೀವಗಳನ್ನು ಉಳಿಸಬಲ್ಲದು. ಮನುಷ್ಯನ ಜೀವ ಉಳಿಸುವ ಈ ಮಹತ್ಕಾರ್ಯವು ಶ್ಲಾಘನೀಯವಾದದ್ದು, ಇದರಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಸಾಮಾಜದ ಆವಶ್ಯಕತೆಗನುಗುಣವಾಗಿ ಕಾಲೇಜಿನಲ್ಲಿ ಪ್ರತಿವರ್ಷವೂ ಎರಡು ಅಥವಾ 3 ಬಾರಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ ಎಂದರು. ನಿಯಮಿತವಾಗಿ ರಕ್ತದಾನ ಮಾಡಿದ ವ್ಯಕ್ತಿಯು ಇತರರಿಗಿಂತ ಆರೋಗ್ಯವಂತನಾಗಿರುವುದಕ್ಕೆ ಸಾಧ್ಯವಿದೆ. ರಕ್ತದಾನದಂತಹ ಕಾರ್ಯಗಳ ಮೂಲಕ ಸಮಾಜದ ಒಳಿತಿಗಾಗಿ ತನ್ನ ಸೇವೆಯನ್ನು ನೀಡುವುದಕ್ಕೆ ಸಂಸ್ಥೆಯು ಸದಾ ಸಿದ್ಧವಾಗಿದೆ ಎಂದರು.
ಕಾಲೇಜಿನ ಎನ್‍ಎಸ್‍ಎಸ್ ಮತ್ತು ಯೂತ್ ರೆಡ್‍ಕ್ರಾಸ್ ಘಟಕದ ಸಂಯೋಜಕ ಡಾ.ರಾಜೇಶ್ ಸ್ವಾಗತಿಸಿ, ಎನ್‍ಎಸ್‍ಎಸ್ ಮತ್ತು ಯೂತ್ ರೆಡ್‍ಕ್ರಾಸ್ ಘಟಕದ ಸಂಯೋಜಕಿ ಪ್ರೊ.ಶ್ರೀಜಾ.ಎಂ ವಂದಿಸಿದರು. ಅನೂಷಾ ಮತ್ತು ಅಮೃತ ಕಾರ್ಯಕ್ರಮ ನಿರ್ವಹಿಸಿದರು.
ಆವಶ್ಯಕತೆಗೆ ತಕ್ಕಂತೆ ಒಟ್ಟು 130 ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಇವರಿಗೆ ಕೆಎಂಸಿ ಆಸ್ಪತ್ರೆಯ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.