ಭಾರತದಲ್ಲಿ ಕೌಶಲ ಆಧಾರಿತ ಶಿಕ್ಷಣ ಪದ್ದತಿಗೆ ಒತ್ತು ಕೊಡುವ ಅನಿವಾರ್ಯತೆ ಇದೆ-ಬೆಳುವಾಯಿ ವಿನಾಯಕ ಕುಡ್ವ….
ಪುತ್ತೂರು: ಪರೀಕ್ಷಾ ಆಧಾರಿತ ಶಿಕ್ಷಣ ಪದ್ದತಿಗೆ ತಿಲಾಂಜಲಿಯನ್ನಿತ್ತು ಭಾರತದಲ್ಲಿ ಕೌಶಲ ಆಧಾರಿತ ಶಿಕ್ಷಣ ಪದ್ದತಿಗೆ ಒತ್ತು ಕೊಡುವ ಅನಿವಾರ್ಯ ಸ್ಥಿತಿ ಇದೆ ಎಂದು ಅನಿವಾಸಿ ಭಾರತೀಯ, ಅಮೆರಿಕಾ ಫ್ಲಾರಿಡಾದ ವೆಸ್ಟ್ ವರ್ಜೀನಿಯ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥ ಬೆಳುವಾಯಿ ವಿನಾಯಕ ಕುಡ್ವ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಮೆರಿಕಾ ಹಾಗೂ ಭಾರತದ ಶಿಕ್ಷಣ ಪದ್ದತಿಗಿರುವ ವ್ಯತ್ಯಾಸ ಎನ್ನುವ ವಿಷಯದ ಬಗ್ಗೆ ಮಾತಾಡಿದರು. ಅಮೆರಿಕಾದಲ್ಲಿ ವಿದ್ಯಾರ್ಥಿಯ ಬುದ್ಧಿಮತ್ತೆಗೆ ಅನುಗುಣವಾಗಿ ನಿರಂತರ ಮೌಲ್ಯಮಾಪನದ ಶಿಕ್ಷಣ ಪದ್ದತಿ ಇದ್ದು ವಿದ್ಯಾರ್ಥಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ವಿಧಾನವನ್ನು ಬದಲಾಯಿಸುವ ಸ್ವಾತಂತ್ರ್ಯ ಶಿಕ್ಷಕರಿಗಿದೆ ಎಂದು ಹೇಳಿದರು. ನಿಯಮಾಧಾರಿತ ಶಿಕ್ಷಣ ಪದ್ದತಿಯಿಂದ ನಾವು ಮಕ್ಕಳನ್ನು ಅಂಕಗಳಿಕೆಗೆ ತಯಾರಿಸುತ್ತಿದ್ದೇವೆ ಇದರಿಂದ ವಿದ್ಯಾರ್ಥಿಗಳು ಪಠ್ಯದಲ್ಲಿರುವುದನ್ನು ಮಾತ್ರ ಕಲಿಯುತ್ತಿದ್ದಾರೆ ಎಂದರು. ನಮಗೆ ತಿಳಿಯದ ಕೆಲವು ವಿಚಾರಗಳು ವಿದ್ಯಾರ್ಥಿಗಳಿಗೆ ತಿಳಿದಿರಬಹುದು ಇದನ್ನು ಮುಕ್ತವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು ಎಂದ ಅವರು ಮುಂದೆ ನಾನೇನಾಗಬೇಕು, ಏನನ್ನು ಕಲಿಯಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯವನ್ನು ಮಕ್ಕಳಿಗೇ ನೀಡಬೇಕು. ಹೆತ್ತವರು ಅಥವಾ ಪೋಷಕರು ಇದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು. ಶಿಕ್ಷಕ ವೃತ್ತಿ ಎನ್ನುವುದು ಶ್ರೇಷ್ಟ ವೃತ್ತಿ ಇದನ್ನು ಸರಿಯಾಗಿ ನಿರ್ವಹಿಸುವ ಮೂಲಕ ವಿದ್ಯಾರ್ಥಿಗಳ ಹಾಗೂ ಸಮಾಜದ ಏಳಿಗೆಗೆ ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು.
ಕಾಲೇಜಿನ ಸಂಚಾಲಕ .ರಾಧಾಕೃಷ್ಣ ಭಕ್ತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ.ಮಹೇಶ್ ಪ್ರಸನ್ನ ಅತಿಥಿಗಳನ್ನು ಪರಿಚಯಿಸಿದರು. ಸಿವಿಲ್ ವಿಭಾಗ ಮುಖ್ಯಸ್ಥ ಡಾ.ಸಂದೀಪ್.ಜೆ.ನಾಯಕ್ ಸ್ವಾಗತಿಸಿ, ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ. ಮಹೇಶ್.ಕೆ.ಕೆ ವಂದಿಸಿದರು.