ಹೊಸ ಕನ್ನಡ ವಾರಪತ್ರಿಕೆ ಬಿಡುಗಡೆ…
ಹೊಸ ಕ್ಯಾಲೆಂಡರ್ ವರ್ಷದಲ್ಲಿ ಹೊಸ ಕನ್ನಡ ಹಸನಾಗಲಿ - ಡಾ ಸುರೇಶ ನೆಗಳಗುಳಿ...
ಮಂಗಳೂರು: ಪುರಭವನ ಹೊರಾಂಗಣದ ಸಭಾ ಭವನದಲ್ಲಿ ಸುದರ್ಶನ್ ಬಿ. ಪ್ರವೀಣರು ನೂತನವಾಗಿ ಪ್ರಾರಂಭಿಸಿದ ವಾರಪತ್ರಿಕೆಯ ಪ್ರಥಮ ಸಂಚಿಕೆ ಹೊಸ ಕನ್ನಡ ವಾರಪತ್ರಿಕೆಯು ರಾಣಿ ಪುಷ್ಪಲತಾ ದೇವಿಯವರ ಅಧ್ಯಕ್ಷತೆಯ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಜ. 8 ರಂದು ಬಿಡುಗಡೆಗೊಂಡಿತು.
ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು ಲೋಕಾರ್ಪಣೆ ಮಾಡಿ ಮಾತನಾಡುತ್ತಾ ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳು ಸಾಕಷ್ಟು ಇದ್ದರೂ ಪತ್ರಿಕೆ ಓದುವ ಹವ್ಯಾಸ ಈಗಲೂ ಇರುವುದರಿಂದ ಇಂತಹ ಪತ್ರಿಕೆಗಳು ಮೂಡಿಬರಲು ಸಾಧ್ಯ. ಪತ್ರಿಕೆ ತನ್ನ ವಸ್ತುನಿಷ್ಠತೆಯನ್ನು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮರೆಯದೆ ಕರ್ತವ್ಯ ನಿರ್ವಹಿಸಬೇಕು. ಪತ್ರಿಕೆ ಬೆಳೆಯಬೇಕಾದರೆ ಪತ್ರಿಕೆಯನ್ನು ಕೊಂಡು ಓದುವ ಮನಸ್ಥಿತಿ ಹೆಚ್ಚಾಗಬೇಕು ಎಂದು ನುಡಿದರು. ವಸ್ತುನಿಷ್ಠ ವರದಿ ಹಾಗೂ ವಿಭಿನ್ನ ನಿರೂಪಣೆಯಿಂದ ಈ ಹೊಸ ಕ್ಯಾಲೆಂಡರ್ ವರ್ಷದಲ್ಲಿ ಉದಯಿಸಿದ ಹೊಸ ಕನ್ನಡವು ಕನ್ನಡ ಹಸನಾಗಲಿ ಎಂದು ಶುಭ ಹಾರೈಸಿದರು.
ಹಿರಿಯ ಪತ್ರಕರ್ತ, ಸಾಹಿತಿ ಜಯಾನಂದ ಪೆರಾಜೆ ಶುಭಾಶಯ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಗಂಗಾಧರ ಗಾಂಧಿ, ಕುಸುಮಾ ಕೆ. ಆರ್, ಶಾಂತಾ ಕುಂಟಿನಿ, ಶಾಂತಾ ಪುತ್ತೂರು, ಎನ್. ನಾಗೇಂದ್ರ ,ಲೋಕಯ್ಯ ಶಿಶಿಲ ವೇದಿಕೆಯಲ್ಲಿದ್ದರು. ದೀಪಾ ಚಿಲಿಂಬಿ ನಿರೂಪಣೆ ಗೈದರು.
ಕುವೆಂಪು ಸಂಸ್ಮರಣೆ ಪ್ರಯುಕ್ತದ ಕನ್ನಡವೇ ಸತ್ಯ ಕವಿಗೋಷ್ಢಿ ಶಾಂತಾ ಪುತ್ತೂರು ಅಧ್ಯಕ್ಷತೆಯಲ್ಲಿ ನಡೆಯಿತು.ಗಂಗಾಧರ ಗಾಂಧಿ , ರಾಣಿ ಪುಷ್ಪಲತಾ ದೇವಿ ಬಳಗದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಮಂಗಳೂರು ಚು.ಸಾ.ಪ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ, ಕಲಾಸೃಷ್ಟಿ ಮಾಯಾಜಾಲ ತಂಡದ ಪ್ರೊ.ಮುಬೀನಾ ಪರ್ವಿನ್ ತಾಜ್ ,ಶಮಾ ಪರ್ವಿನ್ ತಾಜ್, ಮಾ. ಚಾಂದ್, ಮಂಗಳೂರು ಆರೋಗ್ಯ ಇಲಾಖೆಯ ಅನಾರ್ಕಲಿ ಸಲೀಂ, ವೆಂಕಟೇಶ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.