ಬೊಂಡಾಲ ಪ್ರಶಸ್ತಿಗೆ ಹಾಸ್ಯಗಾರ ರವಿಶಂಕರ್ ವಳಕುಂಜ ಆಯ್ಕೆ…

ಫೆ.14ರಂದು ಬೊಂಡಾಲದಲ್ಲಿ ಪ್ರಶಸ್ತಿ ಪ್ರದಾನ...

ಮಂಗಳೂರು: ಹಿರಿಯ ಯಕ್ಷಗಾನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ದನ ಶೆಟ್ಟಿ ಹಾಗೂ ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ‌. ಬೊಂಡಾಲ ರಾಮಣ್ಣ ಶೆಟ್ಟಿಯವರ ಸ್ಮರಣಾರ್ಥ ನೀಡಲಾಗುವ ‘ಬೊಂಡಾಲ ಪ್ರಶಸ್ತಿ’ಗೆ ಕಟೀಲು ಮೇಳದ ಕಲಾವಿದ,ಯಕ್ಷಗಾನ ಹಾಸ್ಯಗಾರ ರವಿಶಂಕರ ವಳಕುಂಜ ಅವರು ಆಯ್ಕೆಯಾಗಿದ್ದಾರೆ. ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗಾಗಿ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆ ಸಮಿತಿ 2024 – 25ನೇ ಸಾಲಿಗೆ ವಳಕುಂಜ ಅವರ ಹೆಸರನ್ನು ಅಂತಿಮಗೊಳಿಸಿದೆ. ಪ್ರಶಸ್ತಿಯು ರೂ.10,000/- ನಗದು, ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

ರವಿಶಂಕರ್ ವಳಕುಂಜ:
ಕಾಸರಗೋಡು ಬದಿಯಡ್ಕದ ನಿವೃತ್ತ ಶಿಕ್ಷಕ ಮತ್ತು ಅರ್ಥಧಾರಿ ದಿ.ಸುಬ್ರಹ್ಮಣ್ಯ ಭಟ್ ಮತ್ತು ಲಕ್ಷ್ಮೀ ಅಮ್ಮ ದಂಪತಿಗೆ ಜನಿಸಿದ ರವಿಶಂಕರ ವಳಕುಂಜ ಅವರು ಕಳೆದ 27 ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಟ್ಯಗುರು ಉಂಡೆಮನೆ ಶ್ರೀಕೃಷ್ಣ ಭಟ್ ಅವರಿಂದ ಯಕ್ಷಗಾನ ನೃತ್ಯಾಭ್ಯಾಸ ಮಾಡಿದ ರವಿಶಂಕರ ಭಟ್ ತನ್ನ ಸೋದರಮಾವ ಹಾಸ್ಯರತ್ನ ನಯನಕುಮಾರ್ ಅವರಿಂದ ಹಾಸ್ಯಗಾರನ ಪಟ್ಟುಗಳನ್ನು ಕಲಿತುಕೊಂಡರು.
ಮೊದಲ ಮೂರು ವರ್ಷ ಕಟೀಲು ಒಂದನೇ ಮೇಳದಲ್ಲಿ ವೇಷಧಾರಿಯಾಗಿದ್ದ ಅವರು ಬಳಿಕ ಮುಖ್ಯ ಹಾಸ್ಯಗಾರನಾಗಿ ಭಡ್ತಿ ಪಡೆದು ನಾಲ್ಕನೇ ಮೇಳಕ್ಕೆ ಸೇರ್ಪಡೆಗೊಂಡರು. ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಕುಬಣೂರು ಶ್ರೀಧರ ರಾವ್, ಪಟ್ಲ ಸತೀಶ್ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಸಂಪಾಜೆ ಶೀನಪ್ಪ ರೈ, ಪೆರುವಾಯಿ ನಾರಾಯಣ ಶೆಟ್ಟಿ, ಮಂಜೇಶ್ವರ ಜನಾರ್ದನ ಜೋಗಿ, ಸುಣ್ಣಂಬಳ ವಿಶ್ವೇಶ್ವರ ಭಟ್, ತೊಡಿಕಾನ ವಿಶ್ವನಾಥ ಗೌಡ ಮೊದಲಾದ ಪ್ರಸಿದ್ಧರ ಒಡನಾಟದಿಂದ ಓರ್ವ ಪ್ರಬುದ್ಧ ಕಲಾವಿದರಾಗಿ ರೂಪುಗೊಂಡರು.
ಬಾಹುಕ, ಸಂಜಯ, ಅಕ್ರೂರ, ಬೃಹಸ್ಪತಿ, ಮಕರಂದ, ವಿಜಯ, ಮೂಕಾಸುರ, ನಾರದ… ಇತ್ಯಾದಿ ಹಾಸ್ಯ ಪಾತ್ರಗಳಲ್ಲಿ ಅವರದೇ ಆದ ಛಾಪನ್ನು ಮೂಡಿಸಿದ ವಳಕುಂಜರು ಓರ್ವ ಲೇಖಕನಾಗಿ ಮತ್ತು ಯಕ್ಷಗಾನ ಸಂಬಂಧೀ ವಿಷಯಗಳ ಸಂಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ. ಯಕ್ಷಗಾನ ವಾಚಿಕ ಸಮಾರಾಧನೆ (ಭಾಗ ೧-೨), ಯಕ್ಷಗಾನ ಪ್ರಸಂಗ ದೃಶ್ಯಾವಳೀ (ಭಾಗ ೧-೨), ಯಕ್ಷ ಪಾತ್ರ ದೀಪಿಕಾ, ಯಕ್ಷಗಾನ ಪ್ರಸಂಗಗಳಲ್ಲಿ ‘ನಾರದ’ – ಹೀಗೆ 6 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಯಕ್ಷಗಾನ ಕಲಾವಿದರನ್ನು ಸಂದರ್ಶಿಸಿ ಸಿದ್ಧಪಡಿಸಿರುವ ಪುಸ್ತಕ ಮುದ್ರಣ ಹಂತದಲ್ಲಿದೆ.
ಯಕ್ಷಗಾನದ ಅಭಿಮಾನಿಗಳು ಮತ್ತು ಸಂಸ್ಥೆಗಳಿಂದ ವಿವಿಧೆಡೆ ಸನ್ಮಾನಿತರಾಗಿರುವ ರವಿಶಂಕರ್ ಪ್ರಸ್ತುತ ಪುತ್ತೂರು ತಾಲೂಕಿನ ಮಾಡಾವಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಪ್ರಶಸ್ತಿ ಪ್ರದಾನ:
ಫೆಬ್ರವರಿ 13ರಂದು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ ವತಿಯಿಂದ ಹತ್ತು ಸಮಸ್ತರ ಆಶ್ರಯದಲ್ಲಿ ಕಟೀಲು ಮೇಳದವರಿಂದ ‘ಹನುಮೋದ್ಭವ, ವೀರಮಣಿ ಮತ್ತು ಮಹಿರಾವಣ ಕಾಳಗ’ ಹಾಗೂ ಫೆ.14ರಂದು ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ‘ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟಗಳು ನಡೆಯಲಿವೆ. ಫೆ. 14ರಂದು ರಾತ್ರಿ ಬಯಲಾಟದ ರಂಗಸ್ಥಳದಲ್ಲಿ ಜರಗುವ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು, ಕಟೀಲು ಕ್ಷೇತ್ರದ ಆಸ್ರಣ್ಣರು ಮತ್ತು ವಿಶೇಷ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು ಎಂದು ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

whatsapp image 2025 02 09 at 12.23.06 pm

whatsapp image 2025 02 09 at 12.55.20 pm

Sponsors

Related Articles

Back to top button