ಮಾಣಿ ಮಠದಲ್ಲಿ ವಸಂತ ವೇದ ಶಿಬಿರ ಉದ್ಘಾಟನೆ…
ಶಿಸ್ತು,ಶ್ರದ್ಧೆ ಕಲಿಕೆಗೆ ಪೂರಕ- ಹಾರಕೆರೆ ನಾರಾಯಣ ಭಟ್...

ವರದಿ: ಜಯಾನಂದ ಪೆರಾಜೆ
ಬಂಟ್ವಾಳ:ಏ.15 : ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಂಡು ಶ್ರದ್ಧೆಯಿಂದ ಕಲಿಯಬೇಕು. ವೇದ ಶಿಬಿರದಲ್ಲಿ ಆಸಕ್ತಿಯಿಂದ ಭಾಗವಹಿಸಿ ವ್ಯಕ್ತಿತ್ವವಿಕಸನ ಮಾಡಿಕೊಳ್ಳಬೇಕು ಎಂದು ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ಆಡಳಿತ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಹೇಳಿದರು.
ಅವರು ಪೆರಾಜೆ ಮಠದಲ್ಲಿ ಏರ್ಪಡಿಸಲಾದ ವಸಂತ ವೇದ ಶಿಬಿರ 2025 ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇ.ಮೂ.ಕಾಂಚನ ಕೃಷ್ಣ ಕುಮಾರ್ ಶಿಬಿರ ಉದ್ಘಾಟಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಪೂರ್ವಜರು ಹಾಕಿಕೊಟ್ಟ ಸಂಸ್ಕಾರದಂತೆ ವೇದಗಳ ಅಧ್ಯಯನ ಮಾಡುವ ಮೂಲಕ ಜ್ಞಾನ ಭಂಡಾರ ಹೆಚ್ಚಿಸಿಕೊಳಬೇಕು. ಕಲಿತ ವಿದ್ಯೆ ಭದ್ರ ಪಡಿಸಲು ಮತ್ತೆಮತ್ತೆ ಅಧ್ಯಯನ ಮಾಡುವುದು ಅಗತ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಲಯದ ಪ್ರಮುಖ ಗುರು ಉಂಡೆಮನೆ ವಿಶ್ವೇಶ್ವರ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳ ಸಾಮರ್ಥ್ಯ ಸದ್ಬಳಕೆಯಾಗುವಂತೆ ಹೆತ್ತವರು ವ್ಯವಸ್ಥೆ ಮಾಡಬೇಕು. ಸೋಲನ್ನೂ ಸವಾಲಾಗಿ ಸ್ವೀಕರಿಸುವ ಧೈರ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು.ಬುದ್ಧಿ ವಂತಿಕೆಯೊಂದಿಗೆ ಹೃದಯವಂತಿಕೆಯೂ ಮುಖ್ಯವೆಂದರು.
ಯೋಗಶಿಕ್ಷಕ ವೆಂಕಟರಮಣ ಹೆಗಡೆ ಮಾತನಾಡಿ ಯೋಗದ ಮಹತ್ವ ತಿಳಿಸಿದರು.
ಪ್ರಧಾನ ಅರ್ಚಕ ವೇ.ಮೂ. ವಿಘ್ನೇಶ್ವರ ಭಟ್ ,ವೇ.ಮೂ. ಮಿತ್ತೂರು ಸತ್ಯಶಂಕರ ಭಟ್, ಕಾರ್ಯದರ್ಶಿ ಶಿವ ಪ್ರಸಾದ ಉಪಸ್ಥಿತರಿದ್ದರು.
ಶ್ರೀ ನಾರಾಯಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವೇ.ಮೂ. ಭಾರ್ಗವ ನಾರಾಯಣ ನಿರೂಪಿಸಿದರು. ಸಂಸ್ಕೃತ ಅಧ್ಯಾಪಕ ಶ್ರೀಹರಿ ಭಟ್ ವಂದಿಸಿದರು. ಒಂದು ತಿಂಗಳು 50 ವಿದ್ಯಾರ್ಥಿಗಳಿಗೆ ವೇದಾಧ್ಯಯನದೊಂದಿಗೆ ನೈಮಿತ್ತಿಕ ಹಾಗೂ ವ್ಯಕ್ತಿತ್ವ ಬೆಳೆವಣಿಗೆಗೆ ಪೂರಕವಾದ ವಿಷಯಗಳನ್ನು ಶಿಕ್ಷಕರು ಕಲಿಸಿಕೊಡುವರು.