ಕುಕ್ಕೆಸುಬ್ರಹ್ಮಣ್ಯ ದೇಗುಲದ ಸಿಇಒ ಆಗಿ ರವೀಂದ್ರ ಎಂ.ಎಚ್…
ಸುಬ್ರಹ್ಮಣ್ಯ : ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಕುಕ್ಕೆ ದೇಗುಲದ ಕಾರ್ಯನಿರ್ವಹಣಾಧಿಕಾರಿ ಆಗಿದ್ದು ಇತ್ತೀಚೆಗೆ ಮೈಸೂರು ಜಿಲ್ಲೆಯ ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ವರ್ಗಾವಣೆಗೊಂಡಿದ್ದ ರವೀಂದ್ರ ಎಂ ಎಚ್ ಅವರನ್ನು ಮರಳಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯಾಗಿ ನಿಯೋಜಿಸಿ ಸರಕಾರ ನ.12 ರಂದು ಆದೇಶಿಸಿದೆ.
ವರ್ಗಾವಣೆ ಬಳಿಕ ದೇಗುಲದ ಕಾರ್ಯನಿರ್ವಾಹಣಾಧಿಕಾರಿಯಾಗಿ ಪುತ್ತೂರು ಸಹಾಯಕ ಆಯುಕ್ತರು ಅಧಿಕಾರ ವಹಿಸಿಕೊಂಡಿದ್ದರು.ಅವರೂ ವರ್ಗಾವಣೆಗೊಂಡ ಬಳಿಕ ಪುತ್ತೂರು ತಹಸಿಲ್ದಾರ್ ಅವರು ಅಧಿಕಾರ ವಹಿಸಿಕೊಂಡಿದ್ದರು.ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಸಿದ್ದತೆಗಳು ನಡೆಯಬೇಕಿದ್ದರಿಂದ ಖಾಯಂ ಕಾರ್ಯನಿರ್ವಾಹಣಾಧಿಕಾರಿಗಳು ಇಲ್ಲದೆ ತೊಡಕಾಗಿತ್ತು. ಇತ್ತೀಚೆಗೆ ಕುಕ್ಕೆಗೆ ಆಗಮಿಸಿದ ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ ಶೀಘ್ರ ಇಲ್ಲಿಗೆ ಖಾಯಂ ಆಗಿ ಕಾರ್ಯನಿರ್ವಾಹಣಾಧಿಕಾರಿ ನಿಯೋಜಿಸುವ ಕುರಿತು ಭರವಸೆ ಇತ್ತಿದ್ದರು.ಇದೀಗ ರವೀಂದ್ರ ಎಂ.ಎಚ್ ಅವರನ್ನು ನೇಮಿಸುವ ಮೂಲಕ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಭರ್ತಿಯಾಗಿದೆ.