ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ….
ಪುತ್ತೂರು: ಮನುಕುಲಕ್ಕೆ ಭೀತಿಯನ್ನುಂಟು ಮಾಡಲಿರುವುದು ಯುದ್ಧವಲ್ಲ, ಹಸಿವು ಮತ್ತು ಮಾನವೀಯ ಮೌಲ್ಯಗಳ ಕುಸಿತ. ಆದ್ದರಿಂದ ನಮ್ಮ ಜ್ಞಾನವು ಜಗತ್ತಿನ ಹಸಿವನ್ನು ಹೋಗಲಾಡಿಸುವಂತಿರಬೇಕು. ಮನುಷ್ಯನು ಹೊಟ್ಟೆಯನ್ನೇ ಕೇಂದ್ರವಾಗಿಟ್ಟುಕೊಂಡು ಹಲವಾರು ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಹಾಗಾಗಿ ಹೊಟ್ಟೆ ಬಟ್ಟೆಯ ಚಿಂತೆಯನ್ನು ಬದಿಗಿಟ್ಟು ಒಳಿತು-ಕೆಡುಕುಗಳನ್ನು ಸಮಸಮವಾಗಿ ಸ್ವೀಕರಿಸಿ ಆತ್ಮಸಂತೋಷವನ್ನು ಪಡೆಯಬೇಕು ಎಂದು ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಜಲಪರಿಸರ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಮಗದ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನ.15 ರಂದು ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಹಂಕಾರ ಎಂಬುದು ಪ್ರತಿಯೊಬ್ಬನ ಶಕ್ತಿಯಾಗಬೇಕು. ಆದರೆ ಅದು ನಿರುಪದ್ರವಿ ಅಹಂಕಾರವಾಗಿರಬೇಕು. ಹಾಗಿದ್ದಾಗ ನಮ್ಮ ಕೀಳರಿಮೆಗಳನ್ನು ಹೋಗಲಾಡಿಸಿ, ನಮ್ಮನ್ನು ನಾವು ಪ್ರೀತಿಸುವಂತೆ ಮಾಡುತ್ತದೆ. ಅಂತೆಯೇ ಯಾವುದೇ ಕೆಲಸ ಮಾಡುವ ಮುನ್ನ ಆತ್ಮ ವಿಶ್ವಾಸವಿದ್ದರೆ ಅದುವೇ ನಮ್ಮನ್ನು ಉನ್ನತ ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾಲೇಜಿನ ಹಿರಿಯ ವಿದ್ಯಾರ್ಥಿ, ಲೆಕ್ಕ ಪರಿಶೋಧಕ ದೀಪಕ್ ಕೆ. ಮಾತನಾಡಿ, ಯಾವುದೇ ಕಾರ್ಯದ ಉಗಮ ಆಲೋಚನೆ. ಅವು ಪ್ರಬಲವಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಏಕೆಂದರೆ ಆಲೋಚನೆಯ ಹಿಡಿತ ನಮ್ಮ ಕೈಯಲ್ಲೇ ಇರುತ್ತದೆ. ಅದುವೇ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತದೆ. ಅದಕ್ಕೆ ಎಂದೂ ವಯಸ್ಸಿನ ಮಿತಿ ಇಲ್ಲ ಎಂದರಲ್ಲದೆ, ಆಲೋಚನೆಗಳು ನಮಗೆ ದಾರಿದೀಪ. ಕನಸುಗಳು ಆಲೋಚನೆಗಳಾಗುತ್ತವೆ. ಆಲೋಚನೆಗಳು ಸೃಜನಶೀಲ ಕೃತಿಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ., ಸಂಚಾಲಕ ಸಂತೋಷ್ ಬಿ., ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಕೆ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಥಮ್ ಕಾಮತ್, ಕಾರ್ಯದರ್ಶಿ ಅಕ್ಷಯ್ ಹಾಗೂ ಸಹಕಾರ್ಯದರ್ಶಿ ಶಿವಾನಿ ಎಂ. ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಮಂಜುನಾಥ್ ವಾರ್ಷಿಕ ವರದಿ ವಾಚಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ರತ್ನಾವತಿ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ನಳಿನ ಕುಮಾರಿ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಹರ್ಷಿತಾ ಪಿ. ಕಾರ್ಯಕ್ರಮ ನಿರೂಪಿಸಿದರು.