ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ನಿಧನ….
ಬೆಂಗಳೂರು : ಹಿರಿಯ ಸಂಶೋಧಕ, ಸಾಹಿತಿ ಡಾ. ಎಂ.ಚಿದಾನಂದಮೂರ್ತಿ(88) ಶನಿವಾರ ಬೆಳಗ್ಗೆ ನಿಧನರಾದರು.
ನ್ಯುಮೋನಿಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶ್ವಾಸಕೋಶದ ಸೋಂಕು ನಿಯಂತ್ರಣಕ್ಕೆ ಬಾರದೆ ನಿಧನರಾಗಿದ್ದಾರೆ.
ಬೆಂಗಳೂರಿನ ವಿಜಯನಗರ ಸಮೀಪ ಹಂಪಿ ನಗರದ ಮೂರನೇ ಕ್ರಾಸ್‌ನಲ್ಲಿರುವ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿದಾನಂದಮೂರ್ತಿಯವರ ಆಸೆಯಂತೆ ಅವರ ದೇಹವನ್ನು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಚಿದಾನಂದಮೂರ್ತಿ ಅವರಿಗೆ ಅನೇಕ ಗೌರವಗಳು, ಅವರ ಕೃತಿಗಳಿಗೆ ಸಾಹಿತ್ಯ ಆಕಾಡೆಮಿ ಪುರಸ್ಕಾರಗಳು,ಗೌರವಗಳು ದೊರೆತಿವೆ. ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರಿಗೆ ಪ್ರತಿವರ್ಷ ಚಿದಾನಂದಮೂರ್ತಿ ಅವರ ಜನ್ಮದಿನವಾದ ಮೇ ಹತ್ತರಂದು “ಚಿದಾನಂದ ಪ್ರಶಸ್ತಿ” ನೀಡಲಾಗುತ್ತಿದೆ.ಚಿದಾನಂದಮೂರ್ತಿ ಅವರು ಕನ್ನಡ ಭಾಷಾಶಾಸ್ತ್ರ, ವಚನ ಸಾಹಿತ್ಯ ಸಂಶೋಧನೆ ಮತ್ತು ಶಾಸನ ಶಾಸ್ತ್ರದಲ್ಲಿ ಅಮೋಘ ಕೊಡುಗೆ ನೀಡಿದ್ದು ವಿಜಯನಗರ ಸಾಮ್ರಾಜ್ಯ, ಹಂಪಿ ಪರಿಸರದ ಕುರಿತೂ ಸಂಶೋಧನೆಗಳನ್ನು ಮಾಡಿದ್ದಾರೆ.