ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವಿಚಾರಗೋಷ್ಠಿ…

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಭಿನ್ನವಾಗಿ ಆಲೋಚಿಸುವ ಶಕ್ತಿ ಇದೆ. ಈ ಚಿಂತನೆಗಳಿಗೆ ಮೂರ್ತ ರೂಪ ಕೊಡುವ ಮೂಲಕ ಅದನ್ನೊಂದು ವಿನ್ಯಾಸವನ್ನಾಗಿಸಿದರೆ ಹೊಸ ಹೊಸ ಉತ್ಪನ್ನಗಳು ಉದ್ಭವಿಸುವುದಕ್ಕೆ ಸಾಧ್ಯವಿದೆ ಎಂದು ಬೆಂಗಳೂರಿನ ವಿದ್ಯಾಕೋಶ ಫ್ರೈವೆಟ್ ಲಿಮಿಟೆಡ್ ಇದರ ಸ್ಥಾಪಕ ಹಾಗೂ ಐಐಎಸ್ಸಿ ಬೆಂಗಳೂರಿನ ಪ್ರಾಜೆಕ್ಟ್ ನೆಟ್‍ವರ್ಕ್ ವಿಭಾಗದ ಪೂರ್ವ ಮುಖ್ಯಸ್ಥ ಡಾ.ಅಶೋಕ್ ರಾವ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ಚಿಂತನೆ, ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ ಎನ್ನುವ ವಿಷಯದ ಬಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ವಿದ್ಯಾರ್ಥಿಯಾಗಿದ್ದಾಗಲೇ ತಮ್ಮ ಪಠ್ಯಕ್ರಮವನ್ನು ಅಭ್ಯಸಿಸುತ್ತಾ ಚಿಂತನೆಗಳನ್ನು ನಡೆಸಬಹುದು. ನಿಮ್ಮ ಕಲ್ಪನೆಗಳನ್ನು ಇತರೊಡನೆ ಹಂಚಿಕೊಳ್ಳುತ್ತಾ ಅದನ್ನೊಂದು ವಿನ್ಯಾಸವನ್ನಾಗಿಸಬೇಕು. ಹೊಸ ಹೊಸ ಯೋಜನೆಗಳನ್ನು ಪ್ರಾರಂಭಿಸುವುದರ ಮೂಲಕ ಉದ್ಯಮಿಗಳಾಗುವತ್ತ ಗಮನಹರಿಸಬೇಕು. ಉದ್ಯೋಗವನ್ನು ಅರಸುವ ಬದಲು ಇತರರಿಗೆ ಉದ್ಯೋಗ ನೀಡುವ ಮೂಲಕ ಸಮಾಜದಲ್ಲಿ ಉನ್ನತಿಯನ್ನು ಸಾಧಿಸಬೇಕು ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ .ರಮಾನಂದ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ವಿದ್ಯಾರ್ಥಿಗಳಾದ ಸುದೀಪ್ ಶಿವರಾವ್ ಸ್ವಾಗತಿಸಿ, ಅಶ್ವಿನಿ.ಕೆ ವಂದಿಸಿದರು.

Sponsors

Related Articles

Back to top button