ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು- ಹ್ಯಾಕಥಾನ್ ಸ್ಪರ್ಧೆ ಅನ್ವೇಶಣ್-2025 ಕ್ಕೆ ಚಾಲನೆ…
ಪುತ್ತೂರು: ಇಂಜಿನಿಯರಿಂಗ್ ಎಂದರೆ ಕೇವಲ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‍ಗಳನ್ನು ಕಲಿಯುವುದಲ್ಲ ಬದಲಾಗಿ ನೈಜ ಜಗತ್ತಿನ ಸಾಮಾಜಿಕ ಸಮಸ್ಯೆಗಳನ್ನು ಅರಿತುಕೊಂಡು ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದೇ ಆಗಿದೆ ಎಂದು ಐಇಇಇ ಮಂಗಳೂರು ಉಪ ವಿಭಾಗದ ಮುಖ್ಯಸ್ಥ ಡಾ.ವೇಣುಗೋಪಾಲ್.ಪಿ.ಎಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಐಇಇಇ ವಿದ್ಯಾರ್ಥಿ ವಿಭಾಗ, ಐಇಇಇ ಮಂಗಳೂರು ಉಪ ವಿಭಾಗ ಮತ್ತು ಐಇಇಇ ಬೆಂಗಳೂರು ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಮಂಗಳೂರು ಉಪವಿಭಾಗ ಮಟ್ಟದ ಪ್ರಾಥಮಿಕ ಸುತ್ತಿನ ಬಹುವಿಭಾಗೀಯ ಹ್ಯಾಕಥಾನ್ ಸ್ಪರ್ಧೆ ಅನ್ವೇಶಣ್-2025 ಕ್ಕೆ ಚಾಲನೆ ನೀಡಿ ಮಾತಾಡಿದರು.
ಗೌರವ ಅತಿಥಿಗಳಾಗಿದ್ದ ಐಇಇಇ ಮಂಗಳೂರು ಉಪ ವಿಭಾಗದ ಕಾರ್ಯದರ್ಶಿ ಡಾ.ವಿನಯ್ ಕುಮಾರ್ ಜಾಧವ್ ಮಾತನಾಡಿ ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾದಾಗ ಅದಕ್ಕೆ ಸೃಜನಾತ್ಮಕವಾಗಿ ಉತ್ತಮ ಕಾರ್ಯತಂತ್ರದೊಂದಿಗೆ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದರು.
ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಮಂಗಳೂರು ಉಪವಿಭಾಗದಾದ್ಯಂತ 21 ಕಾಲೇಜುಗಳ 58 ತಂಡಗಳು ಇಲ್ಲಿ ಭಾಗವಹಿಸುತ್ತಿದ್ದು, ನಾವೀನ್ಯತೆ, ಸೃಜನಶೀಲತೆ ಮತ್ತು ತಾಂತ್ರಿಕ ಪರಿಣತಿಯ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ವಿದ್ಯಾರ್ಥಿಗಳು ಸಾಮಾಜಿಕ ಅಗತ್ಯತೆಗಳನ್ನು ಪೂರೈಸುವ ಯೋಜನೆಗಳನ್ನು ಅಭಿವೃದ್ದಿಪಡಿಸಬೇಕು ಎಂದರು. ಅವರ ಹೊಸ ಹೊಸ ಯೋಚನೆಗಳನ್ನು ಮಾನವ ಸಮುದಾಯಕ್ಕೆ ಪ್ರಯೋಜನಕಾರಿಯಾದ ಉತ್ಪನ್ನಗಳನ್ನಾಗಿ ಪರಿವರ್ತಿಸುವಲ್ಲಿ ಶ್ರಮಿಸಬೇಕು ಎಂದರು.
ಕಾಲೇಜಿನ ಐಇಇಇ ಶಾಖಾ ಸಲಹೆಗಾರ್ತಿ ಡಾ.ಜೀವಿತಾ.ಬಿ.ಕೆ ಅವರ ಮಾರ್ಗದರ್ಶನದಲ್ಲಿ ಐಇಇಇ ಅಧ್ಯಾಪಕ ಸಲಹೆಗಾರ್ತಿ ಪ್ರೊ.ರಜನಿ ರೈ ಕಾರ್ಯಕ್ರಮವನ್ನು ಸಂಘಟಿಸಿದರು. ಎಂಸಿಎ ವಿಭಾಗದ ಪ್ರೊ.ನೀಮಾ ಸಹಕರಿಸಿದರು.




