ಆಧಾರ್, ಪಾಸ್‌ಪೋರ್ಟ್, ವೋಟರ್ ಐಡಿ ಪಡಿತರ ಚೀಟಿ ಯಾವುದೂ ಪೌರತ್ವದ ಸಾಕ್ಷ್ಯವಲ್ಲ: ಕೇಂದ್ರ ಸರ್ಕಾರದ ವಿರುದ್ಧ ಟಿ.ಎಂ. ಶಹೀದ್ ತೆಕ್ಕಿಲ್ ತೀವ್ರ ಆಕ್ರೋಶ …

ಬೆಂಗಳೂರು:ಕೇಂದ್ರ ಸರ್ಕಾರವು ದೇಶದ ಜನಸಾಮಾನ್ಯರು ಬಳಸುವ ಪ್ರಮುಖ ದಾಖಲೆಗಳನ್ನು ಪೌರತ್ವ ಅಥವಾ ಗುರುತಿನ ಪುರಾವೆಯಾಗಿ ನಿರಾಕರಿಸುತ್ತಿರುವ ಬಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಇದರ ಅಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಗೊಂದಲಮಯ ನೀತಿಗಳಿಂದ ಜನಸಾಮಾನ್ಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮೊದಲು ಆಧಾರ್ ಕಾರ್ಡ್ ಅನ್ನು ಕೇವಲ ವಿಳಾಸದ ಪುರಾವೆಯಾಗಿ ಸೀಮಿತಗೊಳಿಸಿ, ಅದು ಪೌರತ್ವದ ಸಾಕ್ಷ್ಯವಲ್ಲ ಎಂದು ಸರ್ಕಾರ ಹೇಳಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಇರುವ ಪಾಸ್‌ಪೋರ್ಟ್ ಅನ್ನು ಕೂಡ ಗುರುತಿನ ಪುರಾವೆಯಲ್ಲ ಎಂದು ಹೇಳಲಾಗುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇವಲ ಆಧಾರ್ ಮತ್ತು ಪಾಸ್‌ಪೋರ್ಟ್ ಮಾತ್ರವಲ್ಲ, ಇದೀಗ ಕೇಂದ್ರ ಸರ್ಕಾರವು ಮತದಾರರ ಗುರುತಿನ ಚೀಟಿ (Voter ID), ಜನನ ಪ್ರಮಾಣಪತ್ರ (Birth Certificate) ಮತ್ತು ಮನೆ ಅಥವಾ ಆಸ್ತಿಯ ದಾಖಲೆಗಳನ್ನು ಪಡಿತರ ಚೀಟಿ ಸಹ ಮಾನ್ಯವಾದ ಗುರುತಿನ ಅಥವಾ ಪೌರತ್ವದ ಸಾಕ್ಷ್ಯವಾಗಿ ಒಪ್ಪಿಕೊಳ್ಳುತ್ತಿಲ್ಲ. ಹಾಗಾದರೆ ಈ ದೇಶದ ಸಾಮಾನ್ಯ ಪ್ರಜೆಗಳು ತಮ್ಮ ಗುರುತನ್ನು ಸಾಬೀತುಪಡಿಸಲು ಇನ್ನಾವ ದಾಖಲೆಗಳನ್ನು ಒದಗಿಸಬೇಕು? ಆಕಾಶದಿಂದ ಹೊಸ ದಾಖಲೆಗಳನ್ನು ತರಬೇಕೇ?ಎಂದು ಶಹೀದ್ ತೆಕ್ಕಿಲ್ ಖಾರವಾಗಿ ಪ್ರಶ್ನಿಸಿದ್ದಾರೆ.
ದಶಕಗಳಿಂದಲೂ ನಾವು ಬಳಸಿಕೊಂಡು ಬರುತ್ತಿರುವ ಎಲ್ಲಾ ಪ್ರಮುಖ ದಾಖಲೆಗಳನ್ನು ಸರ್ಕಾರ ಹೀಗೆ ಒಮ್ಮಿಂದೊಮ್ಮೆಲೆ ತಿರಸ್ಕರಿಸುತ್ತಿರುವುದು ಸುಮಾರು ಕೋಟಿ ಜನಸಾಮಾನ್ಯರಿಗೆ ನೀಡುತ್ತಿರುವ ಕಿರುಕುಳವಾಗಿದೆ. ಯಾವ ದಾಖಲೆಯೂ ಪೌರತ್ವದ ಸಾಕ್ಷ್ಯವಲ್ಲ ಎಂದಾದರೆ, ಜನರ ಬಳಿ ಇರುವ ಪರ್ಯಾಯ ದಾರಿಗಳೇನು? ಈ ನಿರ್ಧಾರಗಳು ಜನರಲ್ಲಿ ಭಯ ಮತ್ತು ಅಭದ್ರತೆ ಮೂಡಿಸುತ್ತಿವೆ. ಸರ್ಕಾರ ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಜನರನ್ನು ಸಂಕಷ್ಟಕ್ಕೆ ದೂಡುವ ಇಂತಹ ನೀತಿಗಳನ್ನು ಕೈಬಿಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

Related Articles