ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟನೆ….
ಬಂಟ್ವಾಳ : ಶ್ರೀರಾಮ ಪದವಿ ಕಾಲೇಜಿನ ದಶಮಾನೋತ್ಸವದ ಪ್ರಯುಕ್ತ ಪ್ರಭವ ವಿಜ್ಞಾನ ಸಂಘ ಮತ್ತು ಪ್ರಸಾದ್ ನೇತ್ರಾಲಯ, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಒಂದು ವಾರದ ಕಾಲ ನಡೆಯುವ ಉಚಿತ ನೇತ್ರ ತಪಾಸಣಾ ಶಿಬಿರವು ಇಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ ಇವರು ನೆರವೇರಿಸಿ ‘ಕಣ್ಣು ಸುತ್ತಮುತ್ತಲಿನ ಜ್ಞಾನವನ್ನು ತಿಳಿಸುವುದರ ಮೂಲಕ ಹೊರ ಜಗತ್ತಿನ ಜ್ಞಾನವನ್ನು ಮೂಡಿಸುತ್ತದೆ. ನಮ್ಮ ದೃಷ್ಟಿ ಎಷ್ಟು ಉತ್ತಮವಾಗಿರುತ್ತದೆಯೋ ಅದೇ ರೀತಿ ಪ್ರತೀ ಕಾರ್ಯ ಸಾಧನೆಯು ಉತ್ತಮವಾಗಲು ಸಾಧ್ಯ. ಇನ್ನೊಬ್ಬರಿಗಾಗಿ ಬದುಕಬೇಕೆಂಬ ಮನೋಭಾವ ನಮ್ಮ ಬದುಕನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ’ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಹಾಗೂ ಈ ಶಿಬಿರದ ಪ್ರಾಯೋಜಕತ್ವವನ್ನು ವಹಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ , ಪ್ರಸಾದ್ ನೇತ್ರಾಲಯ ಇದರ ಸಂಸ್ಥಾಪಕ ಡಾ. ಕೃಷ್ಣಪ್ರಸಾದ್ ಇವರು ಮಾತನಾಡಿ ದೇಶದ ಕನಸು ಕಂಡ ವಿದ್ಯಾಸಂಸ್ಥೆಯಲ್ಲಿ ಯುವ ಪೀಳಿಗೆಯ ದೃಷ್ಠಿ ತಪಾಸಣೆ ಮಾಡುವುದು ಒಂದು ಪುಣ್ಯದ ಕಾರ್ಯ. ಸಂಸ್ಥೆಯ ಸುಮಾರು 3600 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರ ದೃಷ್ಠಿದೋಷ ನಿವಾರಣೆ ಮಾಡುವ ಸೇವೆ ಒಂದು ಅಳಿಲುಸೇವೆ ಎಂದರು. ವೇದಿಕೆಯಲ್ಲಿ ಪ್ರಸಾದ್ ನೇತ್ರಾಲಯದ ವೈದ್ಯ ಡಾ ಧನಂಜಯ, ಹಿರಿಯರಾದ ಕಮಲಾ ಪ್ರಭಾಕರ ಭಟ್, ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‍ಕಟ್ಟೆ ಸ್ವಾಗತಿಸಿ ವಂದಿಸಿದರು.