ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ…

ಪುತ್ತೂರು: ಗುರಿಯನ್ನು ನಿರ್ಧರಿಸಿ ಕಾರ್ಯಯೋಜನೆಯನ್ನು ತಯಾರಿಸಿದ ಮೇಲೆ ಪ್ರತಿದಿನ ನಿಷ್ಠೆಯಿಂದ ಶ್ರಮವಹಿಸಿ ಅಭ್ಯಾಸ ಮಾಡಿದರೆ ನಮ್ಮ ನಾಳೆಗಳು ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರಾಜೇಶ್ ವೈ ಎಚ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಯುಗದಲ್ಲಿ ಎಲ್ಲರೂ ತ್ವರಿತ ಗತಿಯ ಫಲಿತಾಂಶವನ್ನೇ ಬಯಸುತ್ತಾರೆ ಆದರೆ ಅಭ್ಯಾಸವಿಲ್ಲದ ಸಾಧನೆಗಳು ಕ್ಷಣಿಕ ಫಲಿತಾಂಶವನ್ನು ನೀಡಬಲ್ಲದೇ ಹೊರತು ಭವಿಷ್ಯಕ್ಕೆ ಸಹಕಾರಿಯಾಗಲಾರದು ಎಂದೂ ಅವರು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ರಾಷ್ಟ್ರಮಟ್ಟದ ತರಬೇತುದಾರ ಹಾಗೂ ಕಸ್ಟಂಸ್ ಮತ್ತು ಕೇಂದ್ರೀಯ ತೆರಿಗೆಗಳ ಮಂಗಳೂರು ವಿಭಾಗದ ಮೇಲ್ವಿಚಾರಕ ದಿನೇಶ್ ಕುಂದರ್ ಮಾತನಾಡಿ ಜೀವನದಲ್ಲಿ ಎಡರು ತೊಡರುಗಳು, ಜಯ ಅಪಜಯಗಳು ಸಾಮಾನ್ಯ ಅದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅದನ್ನು ಸ್ವೀಕರಿಸುವ ಮತ್ತು ಅದರಿಂದ ಪಾಠ ಕಲಿಯುವ ಸಾಧ್ಯತೆ ಮಾತ್ರ ನಮಗಿದೆ. ಉತ್ತಮ ಕ್ರೀಡಾಪಟುವಾಗಬೇಕಾದರೆ ಸಮತೋಲಿತ ಆಹಾರ, ಪರಿಶ್ರಮದ ಅಭ್ಯಾಸ ಅಗತ್ಯ. ಇದು ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಏರಿಸಬಲ್ಲದು ಮತ್ತು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಬಲ್ಲದು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ ಎಲ್ಲರಲ್ಲಿಯೂ ಒಂದೊಂದು ಪ್ರತಿಭೆಗಳು ಅಡಕವಾಗಿರುತ್ತವೆ ಅದನ್ನು ಗುರುತಿಸಿ ಬೆಳೆಸಿಕೊಳ್ಳಬೇಕು, ಸಾಕಷ್ಟು ಪ್ರಯತ್ನಗಳಿಂದ ಪರಿಪೂರ್ಣರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸತೀಶ್ ರಾವ್.ಪಿ ಮಾತನಾಡಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪಾಠ ಹಾಗೂ ಪಠ್ಯೇತರ ವಿಷಯಗಳಿಗೆ ಸಮಾನ ಅವಕಾಶವನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು ಪಡೆದು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ತೋರಿದ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ನುಡಿದರು.
ಉಪ್ಪಿನಂಗಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪುನೀತ್.ಕೆ ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ಅಚ್ಯುತ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
2019ನೇ ಸಾಲಿನಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಉನ್ನತ ಸಾಧನೆಯನ್ನು ಮಾಡಿದ ಕ್ರೀಡಾಪಟುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಎಂಬಿಎ ವಿಭಾಗದ ವಿದ್ಯಾರ್ಥಿ ಮಹಮ್ಮದ್ ಯೂಸುಫ್ ಬುಲ್‍ಬುಲೇ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಸ್ವಾಗತಿಸಿ, ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಸಂದೀಪ್.ಜೆ.ನಾಯಕ್ ವಂದಿಸಿದರು. ವಿದ್ಯಾರ್ಥಿನಿಯರಾದ ಪ್ರತೀಕ್ಷಾ ರೈ ಹಾಗೂ ಜೆಸ್ಮಿತಾ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬ್ಯಾಂಡ್ ತಂಡದೊಂದಿಗೆ ಕ್ರೀಡಾಪಟುಗಳ ಆಕರ್ಷಕ ಪಥ ಸಂಚಲನ ನಡೆಯಿತು. ಇದರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಬಹುಮಾನ ಗಳಿಸಿದರು.