ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ…

ಸುಳ್ಯ : ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಸುಳ್ಯದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಸುಳ್ಯದ ಖಾಸಗಿ ಬಸ್‌ ನಿಲ್ದಾಣ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸುಳ್ಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಸಿ. ಜಯರಾಮ ಕೋವಿಡ್‌ ಹರಡುವಿಕೆ ಮತ್ತು ಲೋಕ್‌ ಡೌನ್‌ ಸಂಕಷ್ಟದ ಮಧ್ಯೆ ಕೇಂದ್ರ ಸರಕಾರ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸಿ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳಿದೆ. ಇದರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಭರತ್‌ ಮುಂಡೋಡಿ ಮಾತನಾಡಿ ಸರಕಾರ ಪ್ರತಿ ನಿತ್ಯ ಇಂಧನ ಬೆಲೆಯನ್ನು ಏರಿಸುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಹಿಂದೆಲ್ಲಾ ಜನರಿಗೆ ಅನುಕೂಲ ಆಗಲಿ, ಸರಕು ಸಾಗಾಟದ ವೆಚ್ಚ ಕಡಿತ ಆಗಲಿ ಎಂದು ಡೀಸಿಲ್‌ ಕಡಿಮೆ ದರಕ್ಕೆ ನೀಡುತ್ತಿದ್ದರು. ಆದರೆ ಈಗ ಡೀಸಿಲ್‌ ದರ ಕೂಡಾ ಪೆಟ್ರೋಲ್‌ ಬೆಲೆಗೆ ಸಮಾನಾಗಿ ಏರಿಸಲಾಗಿದೆ ಎಂದರು.
ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಎನ್‌. ಜಯಪ್ರಕಾಶ್‌ ರೈ ಮಾತನಾಡಿ, ಕೇಂದ್ರದಲ್ಲಿ ಎನ್‌ ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಸೇರಿದಂತೆ ಜನರಿಗೆ ಪ್ರತಿ ದಿನ ಒಂದಲ್ಲಾ ಒಂದು ರೀತಿಯ ಶಾಕ್‌ ನೀಡುತ್ತಾ ಬಂದಿದೆ ಎಂದು ಹೇಳಿದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್‌ ಮಾತನಾಡಿ, ಜನರ ಜೊತೆ ಬದ್ಧತೆ ಇಲ್ಲದ, ಬಡವರ ಬಗ್ಗೆ ಕಾಳಜಿ ಇಲ್ಲದ
ಕೇಂದ್ರ ಸರಕಾರದ ನಡೆಗಳು ಜನ ವಿರೋಧಿಯಾಗಿದೆ. ಪೆಟ್ರೋಲ್‌, ಡೀಸಿಲ್‌, ಗ್ಯಾಸ್‌ ಬೆಲೆ ಏರಿಕೆಯನ್ನು ಕೂಡಲೇ ನಿಯಂತ್ರಿಸಬೇಕು. ಇಲ್ಲದಿದ್ದರೆ ಜನರು ಬೀದಿಗೆ ಇಳಿದು ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ, 2014ರಲ್ಲಿ ಕಾಂಗ್ರೆಸ್‌ ಸರಕಾರ ಇದ್ದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಬ್ಯಾರೆಲ್‌ ಕಚ್ಚಾತೈಲಕ್ಕೆ 130 ಡಾಲರ್‌ ಇತ್ತು. ಅಂದು ಪೆಟ್ರೋಲಿಗೆ 70 ರೂಪಾಯಿ ಮತ್ತು ಡೀಸೆಲ್‌ ಗೆ 60ರೂ ದರ ಇತ್ತು. ಆದರೆ 2021 ರಲ್ಲಿ ಕೇವಲ 70 ಡಾಲರ್‌ಗಳಿಗೆ ಕಚ್ಚಾತೈಲ ಬರುತ್ತಿದೆ. ಆದರೆ ಇಂದು ಪೆಟ್ರೋಲ್‌ ಬೆಲೆ ನೂರು ರೂಪಾಯಿಗಳ ಗಡಿ ದಾಟಿದೆ. ಕೇವಲ 35ರೂ ಬೆಲೆಗೆ ನೀಡಬಹುದಾದ ಪೆಟ್ರೋಲ್‌ ಗೆ ದುಪ್ಪಟ್ಟು ತೆರಿಗೆ ವಿಧಿಸಿ ದರ 100ರ ಗಡಿ ದಾಟುವಂತೆ ಮಾಡಲಾಗಿದೆ ಎಂದರು. ಸಣ್ಣ ಸಣ್ಣ ರಾಷ್ಟ್ರಗಳಾದ ಶ್ರೀಲಂಕಾ 60ರೂ, ಭೂತಾನ್‌ 69ರೂ, ಬಾಂಗ್ಲಾದೇಶ 77 ರೂ, ನೇಪಾಳ 78 ರೂಪಾಯಿಗಳಲ್ಲಿ ಅಲ್ಲಿಯ ಜನತೆಗೆ ಪೆಟ್ರೋಲ್‌ ನೀಡುತ್ತಿದೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.
ಡಿಸಿಸಿ ಕಾರ್ಯದರ್ಶಿ ಪಿ.ಎಸ್‌ ಗಂಗಾಧರ್‌, ನ.ಪಂ.ಮಾಜಿ ಅಧ್ಯಕ್ಷ ಎಸ್‌. ಸಂಶುದ್ದೀನ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಶಶಿಧರ್‌ ಎಂ.ಜೆ, ನಗರ ಪಂಚಾಯತ್‌ ಸದಸ್ಯರಾದ ಶರೀಫ್‌ ಕಂಠಿ, ಡೇವಿಡ್‌ ಧೀರಾ ಕ್ರಾಸ್ತಾ, ಇಂಟೆಟ್‌ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಯುವ ಕಾಂಗ್ರೆಸ್‌ ಅಧ್ಯಕ್ಷ ಹಮೀದ್‌ ಕುತ್ತಮೊಟ್ಟೆ, ಸಂಪಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಜಿ.ಕೆ ಹಮೀದ್‌, ಕೆಪಿಸಿಸಿ ಸಾಮಾಜಿಕ ಜಾಲತಾಣ ರಾಜ್ಯ ಪ್ರಾಧಾನ ಕಾರ್ಯದರ್ಶಿ ಎಸ್‌.ಎ.ರಿಯಾಜ್ ಕಲ್ಲುಗುಂಡಿ, ಕೆಪಿಸಿಸಿ ಕಾನೂನು, ಮಾನವಹಕ್ಕು ವಿಭಾಗದ ಉಪಾಧ್ಯಕ್ಷ ಧರ್ಮಪಾಲ ಕೊಯಿಂಗಾಜೆ, ಎನ್‌ ಎಸ್‌ ಯುಐ ಅಧ್ಯಕ್ಷ ಕೀರ್ತನ್‌ ಕೊಡಪಾಲ,ಕಾಂಗ್ರೆಸ್‌ ಪ್ರಮುಖರಾ ಕೆ.ಗೋಕುಲ್‌ ದಾಸ್‌, ನಂದರಾಜ ಸಂಕೇಶ, ಸುಧೀರ್‌ ರೈ ಮೇನಾಲ, ಭವಾನಿಶಂಕರ ಕಲ್ಮಡ್ಕ, ಶಹೀದ್‌ ಪಾರೆ, ಮೂಸ ಕುಂಞಿ ಪೈಂಬೆಚ್ಚಾಲು, ಸುರೇಶ್‌ ಎಂ.ಎಚ್‌, ಅನಿಲ್‌ ರೈ ಬೆಳ್ಳಾರೆ, ಆನಂದ ಬೆಳ್ಳಾರೆ, ಬೆಟ್ಟ ಜಯರಾಮ ಭಟ್‌, ಶಿವರಾಂ ಅಮೈ, ಎಸ್‌.ಕೆ.ಹನೀಫ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Sponsors

Related Articles

Back to top button