ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರು ಪೊಲೀಸರ ವಶಕ್ಕೆ….
ಬೆಂಗಳೂರು : ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ದಕ್ಷಿಣ ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ರವಿವಾರ ತಡರಾತ್ರಿ ನಗರಕ್ಕೆ ಕರೆದುಕೊಂಡು ಬಂದಿದ್ದಾರೆ.
2018ರಲ್ಲಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ನಲ್ಲಿ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು. ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ ರವಿ ಪೂಜಾರಿ, ಸುಮಾರು 30 ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ. ಈತನನ್ನು ತಮ್ಮ ಸುಪರ್ದಿಗೆ ಪಡೆಯಲು ರಾಜ್ಯ ಪೊಲೀಸರು ಪ್ರಯತ್ನ ನಡೆಸಿದ್ದರು. ಆದರೆ, ಕಾನೂನು ತೊಡಕುಗಳಿಂದ ಹಸ್ತಾಂತರ ವಿಳಂಬವಾಗಿತ್ತು. ರವಿ ಪೂಜಾರಿಯನ್ನು ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ನೇತೃತ್ವದ ತಂಡ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಪ್ರಕರಣಗಳು ಪೂಜಾರಿ ವಿರುದ್ದ ದಾಖಲಾಗಿದ್ದು ಮಂಗಳೂರು ನಗರ, ಮುಲ್ಕಿ, ಮೂಡಬಿದರೆ, ಬರ್ಕೆ, ಕೋಣಾಚೆ, ಊರ್ವ, ಕಾವೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 33ಕ್ಕೂ ಹೆಚ್ಚು ಪ್ರಕರಣಗಳಿವೆ. ಸುಮಾರು ಒಂದು ವರ್ಷದಿಂದ ರಾಜ್ಯ ಪೊಲೀಸ್ ಇಲಾಖೆ ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳು ನಿರಂತರವಾಗಿ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲು ಪ್ರಯತ್ನ ನಡೆಸಿತ್ತು.