ಶಾಸಕ ಯು. ಟಿ. ಖಾದರ್ ಹತ್ಯೆಗೆ ಸಂಚು – ಭದ್ರತೆ ಹೆಚ್ಚಿಸಲು ಗೃಹ ಸಚಿವರಿಂದ ಆದೇಶ….
ಮಂಗಳೂರು : ಕಾಂಗ್ರೆಸ್ ಶಾಸಕ ಯು. ಟಿ. ಖಾದರ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎನ್ನಲಾಗಿದೆ. ಕರ್ನಾಟಕ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಭದ್ರತೆ ಹೆಚ್ಚಿಸಲು ಗೃಹ ಸಚಿವರು ಆದೇಶ ನೀಡಿದ್ದಾರೆ.
ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿ ಯು. ಟಿ. ಖಾದರ್ ಜೊತೆ ದೂರವಾಣಿ ಮೂಲಕ ಈ ಕುರಿತು ಮಾತುಕತೆ ನಡೆಸಿದ್ದಾರೆ.
ಗುಪ್ತಚರ ಇಲಾಖೆ ಯು. ಟಿ. ಖಾದರ್ ಹತ್ಯೆಗೆ ಸಂಚು ರೂಪಿಸುವ ಮಾಹಿತಿ ಪಡೆದಿತ್ತು. ಬಳಿಕ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿತು. ಮಾಜಿ ಸಚಿವ ಯು. ಟಿ. ಖಾದರ್‌ಗೆ ಭದ್ರತೆ ನೀಡಬೇಕು ಎಂದು ಗೃಹ ಸಚಿವರು ಮಂಗಳೂರು ಪೊಲೀಸರಿಗೆ ಆದೇಶ ನೀಡಿದ್ದಾರೆ.
ಮೂಲಭೂತವಾದಿಗಳು ಯು. ಟಿ. ಖಾದರ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮೊದಲು ಮಾಹಿತಿ ನೀಡಿತ್ತು. ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹತ್ಯೆಯತ್ನ ನಡೆದಿತ್ತು. ಇದೇ ಮಾದರಿಯಲ್ಲಿ ಯು. ಟಿ. ಖಾದರ್ ಹತ್ಯೆಗೆ ಸಂಚು ನಡೆದಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿತ್ತು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಯು. ಟಿ. ಖಾದರ್, “ಒಬ್ಬ ಗನ್ ಮ್ಯಾನ್ ನೀಡುವುದಾಗಿ ಹೇಳಿದ್ದಾರೆ. ಒಬ್ಬ ಗನ್ ಮ್ಯಾನ್‌ನಿಂದ ರಕ್ಷಣೆ ಹೇಗೆ ಸಾಧ್ಯ?. ನಾನು ವಿವಿಧ ಜಿಲ್ಲೆಗಳಿಗೆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಆದ್ದರಿಂದ, ಕಾರ್ಯಕ್ರಮದ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಹೇಳಿದರು.