ದ.ಕ- ಜಿಲ್ಲೆಯಲ್ಲಿ ಸೋಮವಾರ ಮೂವರಿಗೆ ಕೊರೊನಾ ದೃಢ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಕೋವಿಡ್-19 ಪ್ರಕರಣಗಳು ವರದಿಯಾಗಿದೆ.
ಈ ಮೂವರು ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. 30, 25, 55 ವರ್ಷದ ಮೂವರು ಪುರುಷರಿಗೆ ಕೋವಿಡ್ -19 ಸೋಂಕು ತಾಗಿರುವುದು ದೃಢವಾಗಿದೆ. ಈ ಮೂವರು ಮಹಾರಾಷ್ಟ್ರದ ಮುಂಬಯಿ ಮತ್ತು ಪೂನಾದಿಂದ ಬಂದಿದ್ದರು. ಇವರನ್ನು ಬೆಳ್ತಂಗಡಿಯಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಸದ್ಯ ಇವರಿಗೆ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುತ್ತಿದೆ.
ಇನ್ನು ಕೊರೊನ ಸೋಂಕು ಜಿಲ್ಲೆಯಲ್ಲಿ ತನ್ನ ಮತ್ತೊಂದು ಬಲಿ ಪಡೆದಿದೆ. ಜಿಲ್ಲೆಯ ಬೆಳ್ತಂಗಡಿ ಮೂಲದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಸಾವಿಗೆ ಕೊರೊನ ಸೋಂಕು ಕಾರಣ ಎನ್ನಲಾಗಿದೆ. ಹೃದಯ ಕಾಯಿಲೆ ಸಂಬಂಧಿಸಿದಂತೆ ಚಿಕಿತ್ಸೆಗೆಂದು 45 ವರ್ಷದ ಈ ವ್ಯಕ್ತಿ ಆಸ್ಪತ್ರೆಗೆ ಬಂದಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ ನಂತರ ಸಾವನ್ನಪ್ಪಿದ್ದರು. ನಂತರ ಅವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಆತನಿಗೆ ಸೋಂಕು ಇರುವ ಬಗ್ಗೆ ದೃಢವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು 16 ಮಂದಿಗೆ ಕೊರೊನ ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 92 ಕ್ಕೆ ಏರಿಕೆಯಾಗಿದೆ. ಇಂದಿನ 16 ಸೋಂಕಿತರಲ್ಲಿ ಇಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಇವರಿಬ್ಬರು ದುಬೈನಿಂದ ಆಗಮಿಸಿದ್ದರು. ಉಳಿದ 14 ಮಂದಿಯೂ ಮಹಾರಾಷ್ಟ್ರದಿಂದ ಪ್ರಯಾಣಿಸಿದವರಾಗಿದ್ದಾರೆ.