ಸತತ 16 ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ…
ನವದೆಹಲಿ: ಕಳೆದ ಹದಿನೈದು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಸತತವಾಗಿ ಏರಿಕೆಯಾಗುತ್ತಿದ್ದು, ಇಂದು ಕೂಡ ದರ ಏರಿಕೆ ಮುಂದುವರೆದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 34 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 58 ಪೈಸೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರ ಮಾರ್ಚ್ 14ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ರೂ 3 ಹೆಚ್ಚಿಸಿತು. ಮತ್ತೆ ಮೇ 5ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ತೆರಿಗೆ ರೂ10 ಹಾಗೂ ಡೀಸೆಲ್‌ಗೆ ರೂ13 ಹೆಚ್ಚಳ ಮಾಡಿತ್ತು. ಇದರಿಂದಾಗಿ ಸರ್ಕಾರಕ್ಕೆ ರೂ2 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ವರಮಾನ ಸಂಗ್ರಹವಾಗುತ್ತಿದೆ ಎನ್ನಲಾಗಿದೆ.
ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಕಳೆದ ಎರಡು ತಿಂಗಳು ಜಾಗತಿಕವಾಗಿ ತೈಲ ಬೇಡಿಕೆ ಕುಸಿದು, ಬ್ರೆಂಟ್ ಕಚ್ಚಾ ತೈಲ ಫ್ಯೂಚರ್ಸ್ ದರ ದಾಖಲೆಯ ಇಳಿಕೆಯಾದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಲಿಲ್ಲ. ಲಾಕ್ ಡೌನ್ ಸಡಿಲಿಕೆಯಾಗಿ ಬೇಡಿಕೆ ಹೆಚ್ಚುತ್ತಿದ್ದಂತೆ ದಿನೇ ದಿನೇ ದರ ಹೆಚ್ಚಳ ಸಾಮಾನ್ಯವಾಗಿದೆ. ಸತತ 16 ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಕಾಣುತ್ತಿದ್ದು, ಇದೀಗ ಸೋಮವಾರವೂ ಸಹ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ.