ತಲಕಾವೇರಿ – ಬ್ರಹ್ಮಗಿರಿ ಬೆಟ್ಟ ಕುಸಿತ, ಪ್ರಧಾನ ಅಚ೯ಕರ ಕುಟುಂಬ ನಾಪತ್ತೆ…
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಆರಂಭವಾಗಿದೆ.ತಲಕಾವೇರಿಯಲ್ಲಿ ಭೂಕುಸಿತವಾಗಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ ಎಂದು ಕೊಡಗು ಜಿಲ್ಲಾಡಳಿತ ಮಾಹಿತಿ ನೀಡಿದೆ.
ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಪತ್ನಿ, ಆನಂದತೀರ್ಥ ಮತ್ತು ಇಬ್ಬರು ಅರ್ಚಕರು ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಬೆಟ್ಟಸಾಲಿನಲ್ಲಿ ಸುಮಾರು 6 ಕಿ.ಮೀ. ಉದ್ದಕ್ಕೆ ಭೂ ಕುಸಿತವಾಗಿದೆ ಎನ್ನಲಾಗಿದೆ. ಎರಡು ಮನೆಗಳ ಎರಡು ಕಾರು, 20ಕ್ಕೂ ಹೆಚ್ಚು ಹಸುಗಳು ಮಣ್ಣುಪಾಲಾಗಿದೆ ಎಂದು ವರದಿಯಾಗಿದೆ. ಮಂಜು, ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ತಲಕಾವೇರಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಟ್ಟದಲ್ಲಿ ಮಣ್ಣು ಕುಸಿಯುತ್ತಲೇ ಇದೆ. ಈ ಕಾರಣದಿಂದಾಗಿ ಕಾರ್ಯಚರಣೆಯ ತಂಡಕ್ಕೆ ಆ ಪ್ರದೇಶಕ್ಕೆ ತೆರಳಲು ಕಷ್ಟವಾಗುತ್ತಿದೆ.